ದಾವಣಗೆರೆ: ಇಂದು (ಮೇ 10) ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಗ್ಗೆ 7 ರಿಂದ ಮತದಾನ ಶುರುವಾಗಲಿದೆ. ಜಿಲ್ಲೆಯಲ್ಲಿ 1,685 ಮತಗಟ್ಟೆಗಳಲ್ಲಿ ಒಟ್ಟು 14,42,553 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಶಾಂತಿ, ಸುವ್ಯವಸ್ಥಿತ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಸಕಲ ಸಿದ್ಧತೆ ಕೈಗೊಂಡಿದೆ.
ಜಿಲ್ಲೆಯಲ್ಲಿ 1,685 ಮತಗಟ್ಟೆಗಳಿದ್ದು, 1685 ಬ್ಯಾಲೆಟ್ ಯುನಿಟ್,1685 ಕಂಟ್ರೋಲ್ ಯುನಿಟ್, 1685 ವಿವಿಪ್ಯಾಟ್ ಗಳಿವೆ. ಜೊತೆಗೆ ಶೇ 20ರಷ್ಟು ಹೆಚ್ಚುವರಿಯಾಗಿ 339 ಬ್ಯಾಲೆಟ್ ಮತ್ತುಕಂಟ್ರೋಲ್ ಯುನಿಟ್, ಶೇ 30 ರಷ್ಟು ವಿವಿ ಪ್ಯಾಟ್ 509 ಹೆಚ್ಚುವರಿ ಸೇರಿ ಒಟ್ಟು 2029 ಬ್ಯಾಲೆಟ್ ಯುನಿಟ್, 2029 ಕಂಟ್ರೋಲ್ ಯುನಿಟ್, 2194 ವಿವಿಪ್ಯಾಟ್ ಹಂಚಿಕೆ ಮಾಡಲಾಗಿದೆ.
ಚುನಾವಣಾ ವೀಕ್ಷಕರು, ಚೆಕ್ ಪೋಸ್ಟ್‌ಗಳ ಪರಿಶೀಲನೆ, ಮದ್ಯ ಮಾರಾಟ ನಿಷೇಧ ಸೇರಿ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 13ರಂದು
ಮತ ಎಣಿಕೆಗಾಗಿ ಅಗತ್ಯ ಅಧಿಕಾರಿ, ಸಿಬ್ಬಂದಿಗೆ ವಿವಿಧ ಹಂತದ ತರಬೇತಿ ನೀಡಲಾಗಿದೆ. ಮತದಾನದ ದಿನದ೦ದು ಗ್ರಾಮ, ಪಟ್ಟಣ, ನಗರ ಪ್ರದೇಶದಲ್ಲಿ ವಾರದ ಸಂತೆ ನಿಷೇಧಿಸಲಾಗಿದೆ.
ಜಿಲ್ಲೆಯ 7 ಕ್ಷೇತ್ರಗಳಲ್ಲಿ 4,562 ಮಂದಿ ಮತ ಚಲಾಯಿಸಿದ್ದಾರೆ. 80 ವರ್ಷ ಮೇಲ್ಪಟ್ಟ 1,784 ಮಂದಿ, 495 ವಿಶೇಷ ಚೇತನರು ಅ೦ಚೆ ಮತದಾನ ಮಾಡಿದ್ದು, 268 ಮಂದಿ ಸೇವಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಿಲ್ಲಾದ್ಯಂತ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ ಸೇರಿ ಸಂಘ-ಸಂಸ್ಥೆಗಳು, ಸಂಘಟನೆಗಳಿಂದ ಮತದಾನ ಜಾಗೃತಿ ಕಾರ್ಯವನ್ನೂ ಕೈಗೊಳ್ಳಲಾಗಿದೆ.
ಭಾನುವಾರ ಸಂಜೆಯಿಂದಲೇ ಜಿಲ್ಲಾದ್ಯ೦ತ ನಿಷೇಧಾಜ್ಞೆ ಜಾರಿ ಗೊಂಡಿದ್ದು, ಹೊರ ಪ್ರದೇಶದ ಯಾವುದೇ ವ್ಯಕ್ತಿಗಳಿದ್ದರೂ ಜಿಲ್ಲೆಯಿಂದ ಹೊರ ಹೋಗಬೇಕು. ಮತದಾರರ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳು ಕಂಡು ಬಂದಲ್ಲಿಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳ ವ್ಯಾಪ್ತಿಯಲ್ಲೂ ಶಾಂತಿಯುತ, ನಿರ್ಭೀತಿಯಿ೦ದ ಜನರು ಮತ
ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಮತದಾನದದಿನದಂದು 2215 ಸಿವಿಲ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಿದೆ. 20 ತಂಡ ಸಿಆರ್‌ಪಿಎಫ್‌ನಲ್ಲಿ 1262 ಸಿಬ್ಬಂದಿ, 7 ಕೆಎಸ್‌ಆರ್‌ಪಿ ತುಕಡಿಯ 150 ಜನ ಸಿಬ್ಬಂದಿಗಳ ಎಲ್ಲಾ 1685 ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.



