ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಈ ಮಳೆ ಮೇ 8ರಿಂದ ಮತ್ತಷ್ಟು ಚುರುಕು ಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮೇ 8ರಂದು ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಎಂದಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸುತ್ತಮುತ್ತ ಪ್ರದೇಶಗಳು, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ರಾಯಲಸೀಮಾ ಹಾಗೂ ಕರ್ನಾಟಕದಲ್ಲಿ ವರುಣ ಅಬ್ಬರಿಸಲಿದ್ದಾನೆ. ರಾಜ್ಯದಲ್ಲಿ ನಿನ್ನೆ ( ಮೇ 06) ಬಳ್ಳಾರಿ ಜಿಲ್ಲೆಯ ಹಗರಿ, ತುಮಕೂರಿನ ಮಿಡಿಗೇಶಿ, ಕಲಬುರಗಿಯ ಚಿತ್ತಾಪುರ, ಬೆಂಗಳೂರು ನಗರದ ಜ್ಞಾನಭಾರತಿ ವಿವಿ ಕ್ಯಾಂಪಸ್, ಬಳ್ಳಾರಿಯ ಕುರುಗೋಡು, ಕೋಲಾರ ಹಾಗೂ ರಾಮನಗರ ಸೇರಿ ಅನೇಕ ಕಡೆ ಮಳೆ ಬಿದ್ದಿದೆ.
ಚಂಡಮಾರುತ ಪರಿಣಾಮದಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರದಲ್ಲಿ ಮೇ 8 ಮತ್ತು ಮೇ 9ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.



