ಡಿವಿಜಿ ಸುದ್ದಿ, ದಾವಣಗೆರೆ: ಅಂತರ ರಾಜ್ಯ ಮರಳು ಸಾಗಣೆಗೆ ನಿರ್ಬಂಧವಿದ್ದು, ರಾಜ್ಯದೊಳಗೆ ಅಂತರ್ ಜಿಲ್ಲೆಯಲ್ಲಿ ಮರಳು ಸಾಗಿಸಲು ಯಾವುದೇ ನಿರ್ಬಂಧ ಇಲ್ಲ. ಆದರೆ, ರಾತ್ರಿ ವೇಳೆ ಮರಳು ಸಾಗಣೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮರಳು ಮಾರಾಟ ದರ ನಿಗದಿ, ತನಿಖಾ ಠಾಣೆ ಮತ್ತು ಸ್ಕ್ವಾಡ್ ನೇಮಕ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯ, ಸಾರ್ವಜನಿಕ ಕಾಮಗಾರಿ ಹಾಗೂ ರೈತರು ಚಕ್ಕಡಿಗಳಲ್ಲಿ ಮರಳು ಸಾಗಿಸಲು ಅನುಮತಿ ಇದ್ದು, ಖಾಸಗಿ ಕಾಮಗಾರಿಗಳು ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಮರಳು ಸಾಗಾಣೆಗೆ ಅನುಮತಿ ಪಡೆಯಬೇಕು. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಎಸ್.ಆರ್.ದರದಂತೆ ಜಿಲ್ಲಾ ಮರಳು ಸಮಿತಿಯು ದರ ನಿಗದಿ ಮಾಡಲಿದೆ. ಹೊನ್ನಾಳ, ಹರಿಹರ ತಾಲ್ಲೂಕಿನಲ್ಲಿ ತಲಾ 3 ಚೆಕ್‍ಪೋಸ್ಟ್ ತೆರೆಯಲಾಗಿದೆ. ಈ ಚೆಕ್‍ಪೋಸ್ಟ್‍ಗಳು 24 7 ಕಾರ್ಯ ನಿರ್ವಹಿಸುತ್ತಿದ್ದು, ಅಕ್ರಮ ಸಾಗಣೆಯನ್ನು ತಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಚೆಕ್‍ಪೋಸ್ಟ್‍ಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ, ಸಿಸಿಟಿವಿ ಇರಬೇಕು ಹಾಗೂ ಕಡ್ಡಾಯವಾಗಿ ರಿಜಿಸ್ಟರ್ ನಿರ್ವಹಿಸಬೇಕು. ಎಸ್ ಶೇಪ್ಡ್ ಬ್ಯಾರಿಕೇಡ್ಸ್ ಹಾಕಬೇಕು. ಪ್ರತಿ ಚೆಕ್‍ಪೋಸ್ಟ್‍ನಲ್ಲಿ ಪೊಲೀಸ್ ಹಾಗೂ ಹೋಂಗಾರ್ಡ್ ಸಿಬ್ಬಂದಿ ಇದ್ದು, ಇವರೊಂದಿಗೆ ಮೂವಿಂಗ್ ತಂಡಗಳು ಕಾರ್ಯನಿರ್ವಹಿಸಲಿವೆ. ಯಾವುದೇ ಅಕ್ರಮ ಮರಳು ಸಾಗಣೆ ಕಂಡುಬಂದಲ್ಲಿ ನಮ್ಮ ಕಂಟ್ರೋಲ್ ರೂಂ ಅಥವಾ ಸಹಾಯವಾಣಿ ಸಂಖ್ಯೆ 112 ಕ್ಕೆ ದೂರು ಸಲ್ಲಿಸಬಹುದು ಎಂದರು.

ನದಿ ದಂಡೆಯ ಗ್ರಾಮದ ರೈತರು ಅಕ್ರಮವಾಗಿ ಚಕ್ಕಡಿಗಳ ಮೂಲಕ ಮರುಳನ್ನು ಶೇಖರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಜನರಿಗೆ ತೊಂದರೆಯಾಗದಂತೆ ಮರಳನ್ನು ವಶಪಡಿಸಿಕೊಂಡು ತಾಲ್ಲೂಕು ಮರುಳು ಸಂಗ್ರಹಣಾ ಕೇಂದ್ರದಲ್ಲಿ ಶೇಖರಿಸುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ 11 ಚೆಕ್‍ಪೋಸ್ಟ್‍ಗಳು ಕಾರ್ಯನಿರ್ವಹಿಸುತ್ತಿದ್ದು ನದಿ ತೀರದ ಗ್ರಾಮಗಳಲ್ಲಿ ಹೆಚ್ಚಿನ ಚೆಕ್‍ಪೊಸ್ಟ್‍ಗಳನ್ನು ಪ್ರಾರಂಭಿಸುವ ಅವಶ್ಯಕತೆ ಇದೆ. ವಿಶೇಷವಾಗಿ ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ, ಬಿದರಕಟ್ಟಿ, ಗೋವಿನಕೋವಿ, ಬೀರಗೊಂಡನಹಳ್ಳಿಗಳಲ್ಲಿ ಸ್ಥಳೀಯ ಜನರು ಚಕ್ಕಡಿಗಳ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಕುರಿತು ತಾಲ್ಲೂಕಿನ ತಹಶೀಲ್ದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾನೂನು ರೀತಿ ಕ್ರಮ ವಹಿಸುವಂತೆ ಸೂಚಿಸಿದರು.ಇಲಾಖಾ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಅಕ್ರಮ ಮರಳು ಸಾಗಣೆ ಮಾಹಿತಿ ಹಂಚಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಕೋದಂಡರಾಮ, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ ಗಂಗಲ್, ಇತರೆ ಅಧಿಕಾರಿಗಳು ಹಾಜರಿದ್ದರು.



