ದಾವಣಗೆರೆ; ಲಂಚ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಚನ್ನಗಿರಿ ಪಕ್ಷೇತರ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ ಪರ ಪ್ರಚಾರ ಮಾಡಿದ್ದಾರೆ. ಹೀಗಾಗಿ ಅವರನ್ನು ಉಚ್ಚಾಟನೆ ಮಾಡುವ ಕುರಿತು ಒಂದೆರಡು ದಿನಗಳಲ್ಲಿ ರಾಜ್ಯ ಸಮುತಿ ಕ್ರಮ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಗೆ ಆರು ವರ್ಷ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಮಲ್ಲಿಕಾರ್ಜುನ್ ಪರ ಮಾಡಾಳ್ ವಿರೂಪಾಕ್ಷಪ್ಪ ಪ್ರಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಲ್ಲಿಕಾರ್ಜುನ್ ಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯದಂತೆ ಸೂಚನೆ ನೀಡಲಾಗಿತ್ತು. ಚನ್ನಗಿರಿಯಲ್ಲಿ ಶಿವಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಹರಿಹರದಲ್ಲಿ ನಾನು ಸಹ ಆಕಾಂಕ್ಷಿಯಾಗಿದ್ದೆ. ಇದೇ ರೀತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದರು. ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಾಯಕೊಂಡದಲ್ಲಿ ಸರ್ವೇ ವರದಿ ಆಧರಿಸಿ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಸಿಗದವರು ಅಸಮಾಧಾನ ಆಗುವುದು ಸಾಮಾನ್ಯ. ಇಲ್ಲಿ ಪಕ್ಷವೇ ಮುಖ್ಯ. ಪಕ್ಷದ ನಿರ್ಧಾರಕ್ಕೆ ಎಲ್ಲರು ತಲೆಬಾಗಲೇಬೇಕು. ಇಲ್ಲಿ ಆರ್. ಎಲ್. ಶಿವಪ್ರಕಾಶ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಕಾಲಾವಕಾಶವಿದ್ದು ನಾಮಪತ್ರ ವಾಪಸ್ ಪಡೆಯುವ ವಿಶ್ವಾಸವಿದೆ ಎಂದರು.
ಕಳೆದ 35 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಯಾವ ಲಿಂಗಾಯತ ನಾಯಕರನ್ನು ಮುಖ್ಯಮಂತ್ರಿ ಮಾಡಿದೆ? ಬಿಜೆಪಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಕಾಂಗ್ರೆಸ್ ಕುತಂತ್ರಕ್ಕೆ ಲಿಂಗಾಯತ ಒಳಗಾಗುವುದಿಲ್ಲ ಎಂದರು.



