ದಾವಣಗೆರೆ : ಕಿಡ್ನಿ ಶಸ್ತ್ರಚಿಕಿತ್ಸೆಗೆ ನಟ ಪುನೀತ್ ರಾಜಕುಮಾರ್ ಅವರಿಂದ ಧನ ಸಹಾಯ ಪಡೆದಿದ್ದ ಯುವತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಕುಮಾರ ಹಾಗೂ ಮಂಜುಳಾ ದಂಪತಿ ಪುತ್ರಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪ್ರೀತಿ (18) ಸಾವನ್ನಪ್ಪಿದ ಯುವತಿಯಾಗಿದ್ದಾರೆ.
ಇಸ್ತ್ರಿ ಮಾಡುವ ಕುಮಾರ್ ಮಗಳಿಗೆ ಬರೋಬ್ಬರಿ 12.50 ಲಕ್ಷ ರೂಪಾಯಿ ವೆಚ್ಚ ಮಾಡಿ ನಟ ದಿ.ಪುನೀತ್ ಕಿಡ್ನಿ ಶಸ್ತ್ರ ಚಿಕಿತ್ಸೆ (2017) ಮಾಡಿಸಿದ್ದರು. ಪುನೀತ್ ಸಾವಿನ ನಂತರ ನಿತ್ಯ ಪುನೀತ್ ಅವರ ಫೋಟೋಗೆ ಪೂಜೆ ಸಲ್ಲಿಸುತ್ತಿದ್ದ ಆ ಯುವತಿ ಇಂದು ಸಾವನ್ನಪ್ಪಿದ್ದಾಳೆ. ಪುನೀತ್ ಅಭಿಮಾನಿಯಾಗಿದ್ದಳು, ಅವರಿಂದ ಜೀವದಾನ ಪಡೆದಿದ್ದ ಪ್ರೀತಿ, ಪುನೀತ್ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದಳು. ಇದೀಗ ಪುನೀತ್ ನೆನಪಲ್ಲಿಯೇ ಕೊನೆಯುಸಿರುಬಿಟ್ಟಿದ್ದಾಳೆ.
ಕುಮಾರ ಚನ್ನಗಿರಿ ಪಟ್ಟಣದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಕಡು ಬಡವ. ಆಗ ಕಿಡ್ನಿ ತರಲು ಹಣ ಇಲ್ಲ ಅಂತ ತಾನೇ ತನ್ನ ಒಂದು ಕಿಡ್ನಿ ಪುತ್ರಿಗೆ ಕೊಡಲು ಸಿದ್ಧರಾಗಿದ್ದರು. ಆದ್ರೆ ತಂದೆ ಕಿಡ್ನಿ ತೆಗೆದು ಮಗಳಿಗೆ ಹಾಕಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತೆ. ಕನಿಷ್ಟ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕು. ಇದು ಈ ಕುಟುಂಬಕ್ಕೆ ಆಗದ ಕೆಲಸ ಎಂದು ಸುಮ್ಮನಿದ್ದರು. ಈ ವಿಚಾರವನ್ನು ಯಾರೋ ಪುನೀತ್ ರಾಜ್ಕುಮಾರ್ ಅವರಿಗೆ ತಲುಪಿಸಿದ್ದರು.
ಪ್ರೀತಿಯ ಸ್ಥಿತಿ ಕಂಡು ಪುನೀತ್ ಅವರೇ ಬೆಂಗಳೂರಿಗೆ ಬರಲು ಹೇಳಿ. ಇವರಿಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿ, ತಂದೆ ಕುಮಾರನ ಕಿಡ್ನಿ ತೆಗೆದು ಮಗಳು ಪ್ರೀತಿಗೆ ಹಾಕಲಾಗಿತ್ತು. ಆಗ ಪ್ರೀತಿ ಸಾವನ್ನು ಜಯಿಸಿದ್ದರು. ಪುನೀತ್ ಸಾವಿನ ನಂತರ ವಿಪರೀತ ದುಃಖಿತಳಾಗಿದ್ದಳು. ಆದ್ರೆ ಈಗ ಪುನೀತ್ರಿಂದ ಜೀವದಾನ ಪಡೆದ ಯುವತಿ, ಪುನೀತ್ ನೆನಪಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.



