ಡಿವಿಜಿ ಸುದ್ದಿ, ಬೆಂಗಳೂರು: ತುಮಕೂರಿನಲ್ಲಿ ನಿನ್ನೆ ರೈತರ ಸಮಾವೇಶ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರೆ ಪರಿಹಾರಕ್ಕೆ ಹೆಚ್ಚಿನ ಅನುದಾನ ಕೇಳಿದ್ದು, ವಿಪಕ್ಷಗಳಿಗಿಂತ ಸ್ವಪಕ್ಷದಲ್ಲಿಯೇ ಸಾಕಷ್ಟು ಸಂಚಲನ ಮೂಡಿಸಿದೆ.
ರಾಜ್ಯದಲ್ಲಿ ಭೀಕರ ಪ್ರವಾಹದಿಂದ 30 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ನೆರವು ನೀಡಬೇಕು ಎಂದು ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಆದರೆ, ಪ್ರಧಾನಿ ಅವರು ಇಡೀ ಭಾಷಣದಲ್ಲಿ ಎಲ್ಲಿಯೂ ಅನುದಾನ ನೀಡುವ ಬಗ್ಗೆ ಮಾತಾಡಲಿಲ್ಲ. ಇದೀಗ ಇದೇ ವಿಚಾರವನ್ನು ಇಟ್ಟುಕೊಂಡ ಯಡಿಯೂರಪ್ಪ ವಿರೋಧಿ ಬಣ, ಯಡಿಯೂರಪ್ಪ ಭಾಷಣದ ಇಂಚಿಂಚು ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಹೊರಹಾಕಿದ ಅಸಮಾಧಾನದ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಥಂಡಾ ಹೊಡೆದಿದ್ದಾರೆ. ಯಡಿಯೂರಪ್ಪ ಹೇಳಿಕೆ ನೋಡಿ ಬೆಚ್ಚಿ ಬಿದ್ದ ರಾಜ್ಯ ನಾಯಕರು, ಯಡಿಯೂರಪ್ಪ ಹೇಳಿಕೆ ಬಗ್ಗೆ ತಲೆಕೆಡಿಸಿಕೊಂಡಿದ್ಧಾರೆ. ಮುಖ್ಯಮಂತ್ರಿಗಳು ನಿನ್ನೆ ಯಾಕೆ ಹೀಗೆ ಮಾತನಾಡಿದರು?, ಅದರಲ್ಲೂ ಪ್ರಧಾನಿ ಎದುರೇ ಬಿಎಸ್ವೈ ಹಾಕಿದ ಗುಟುರು ಸಂಚಲ ಮೂಡಿಸಿದೆ. ಯಾವ ಧೈರ್ಯದಿಂದ ಮಾತನಾಡಿದರು. ಇದರ ಹಿಂದಿನ ಅಸಲಿಯತ್ತೇನು? ಹೀಗೆ ಬಿಜೆಪಿಗರಲ್ಲಿ ಸಾಕಷ್ಟು ಗೊಂದಲ ಹುಟ್ಟು ಹಾಕಿದೆ.
ಇಂತಹ ಸಂದರ್ಭಕ್ಕೆ ಕಾಯುತ್ತಿದ್ದ ವಿರೋಧಿ ಬಣ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಕ ತುಮಕೂರು ಭಾಷಣ ಕುರಿತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸೀಕ್ರೆಟ್ ರಿಪೋರ್ಟ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ಹೇಳಿಕೆಯ ಹಿಂದಿನ ಕಾರಣ, ಉದ್ದೇಶಗಳ ಕುರಿತು ವರದಿಯಲ್ಲಿ ನಳಿನ್ ಕುಮಾರ್ ಕಟೀಲ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸ್ತಾರಾ? ಯಡಿಯೂರಪ್ಪ ವಿಚಾರದಲ್ಲಿ ಅಮಿತ್ ಶಾ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ .