ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಕಾಂಗ್ರೆಸ್ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎಐಸಿಸಿ ಬಿಡುಗಡೆ ಮಾಡಿದೆ.ಇದಕ್ಕೂ ಮುನ್ನವ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಇದೀಗ ಎರಡನೇ ಪಟ್ಟಿ ಪ್ರಕಟಿಸಿದ್ದು, 42 ಅಭ್ಯರ್ಥಿಗಳನ್ನು ಘೋಷಿಸಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿಯಿಂದ ಹೊಸ ಮುಖ ಬಸವರಾಜ್ ವಿ .ಶಿವಗಂಗಾಗೆ 2 ನೇ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಈ ಮೂಲಕ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾದಂತಾಗಿದೆ. ಹಾಲಿ ಶಾಸಕ ಎಸ್. ರಾಮಪ್ಪ ಪ್ರತಿನಿಧಿಸುವ ಹರಿಹರ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಆಕಾಂಕ್ಷಿಯಾಗಿರುವ ಹೊನ್ನಾಳಿ ಹಾಗೂ ಜಗಳೂರು ವಿಧಾಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಉಳಿದಿದೆ. ಮೊದಲ ಪಟ್ಟಿಯಲ್ಲಿ ದಾವಣಗೆರೆ ಉತ್ತರದಿಂದ ಶಾಮನೂರು ಶಿವಶಂಕರಪ್ಪ, ದಕ್ಷಿಣದಿಂದ ಎಸ್ .ಎಸ್. ಮಲ್ಲಿಕಾರ್ಜುನ್ ಹಾಗೂ ಮಾಯಕೊಂಡದಿಂದ ಕೆ.ಎಸ್. ಬಸವಂತಪ್ಪ ಗೆ ಟಿಕೆಟ್ ಘೋಷಣೆಯಾಗಿತ್ತು. ಇನ್ನೂ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಒಂದು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ನೀಡಲಾಗಿದೆ.
ಹಾಲಿ ಶಾಸಕರಿರುವ ಹರಿಹರ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಇದುವರೆಗೂ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಇನ್ನೂ 58 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.