ದಾವಣಗೆರೆ; ಮಾಯಕೊಂಡ ಕಾಂಗ್ರೆಸ್‌ನಲ್ಲಿ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆಯಾಗಿದೆ. ಇದೀಗ ಪ್ರಬಲ ಆಕಾಂಕ್ಷಿಗಳಿಂದ ಭಿನ್ನಮತ ಮುಂದುವರೆದಿದ್ದು, ಟಿಕೆಟ್ ಕೈ ತಪ್ಪಿದ್ದಕ್ಕೆ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪಕ್ಷೇತರವಾದರೂ ಸರಿ ಸ್ಫರ್ಧೆ ಖಚಿತ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ನನ್ನ ಸಂಪರ್ಕದಲ್ಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಬೇರೆ ಪಕ್ಷಗಳಿಂದಲೂ ಆಫರ್ ಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಗೋಷ್ಠಿಯಲ್ಲಿ ತಿಳಿಸಿದರು.
ನನಗೆ ಟಿಕೆಟ್ ಕೈ ತಪ್ಪಿಸಲೆಂದೇ ಫೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಎಐಸಿಸಿ, ಕೆಪಿಸಿಸಿಗೆ ತೋರಿಸಿ ಟಿಕೆಟ್ ತಪ್ಪಿಸಲಾಗಿದೆ. ಮಹಿಳೆಗೆ ಅಪಮಾನ, ಚಾರಿತ್ರ್ಯವಧೆ, ತೇಜೋವಧೆ ಮಾಡಲಾಗಿದೆ. ಕೇವಲ ಟಿಕೆಟ್‌ಗಾಗಿ ಒಬ್ಬ ಹೆಣ್ಣು ಮಗಳ ಮಾನ, ಮರ್ಯಾದೆ ತೆಗೆಯುವಷ್ಟು ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಮೋಸ ಮಾಡಿ ಟಿಕೆಟ್ ತಂದರೆ ಗೆಲ್ಲುತ್ತೇವೆ ಎಂಬುದು ಭ್ರಮೆ. ಜನರು ತಕ್ಕ ಪಾಠ ಕಲಿಸುವುದು ಖಚಿತವಾಗಿದೆ. ಕ್ಷೇತ್ರದಲ್ಲಿ 97 ಸಾವಿರ ಮಹಿಳಾ ಮತದಾರರಿದ್ದಾರೆ, 2 ಲಕ್ಷ ಮತಗಳಿವೆ. ಕ್ಷೇತ್ರ ಮಾತ್ರವಲ್ಲ ಪಕ್ಷದ ಮುಖಂಡರ ಬಳಿ ಫೋಟೋ ತೋರಿಸಿಅಪಮಾನ ಮಾಡಲಾಗಿದೆ. ಈ ಕಾರಣಕ್ಕೆ ಬಸವಂತಪ್ಪ ಎಂಬುವವರ ವಿರುದ್ಧ ದೂರು ನೀಡಿ ವಾರ ಕಳೆದರೂ, ಯಾವುದೇ ಕ್ರಮ ಆಗಿಲ್ಲ ಎಂದರು.
ನಾನು ಶಾಮನೂರು ಶಿವಶಂಕರಪ್ಪನವರ ಆಶೀರ್ವಾದದಿಂದ ಬೆಳೆದಿರುವೆ. ಮತ್ತು ಮಾಯಕೊಂಡದ ಜನರ ಮನಸ್ಸನ್ನು ಗೆದ್ದಿದ್ದೇನೆ. ಅಲ್ಲದೇ ಕ್ಷೇತ್ರದ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದೆ. ಈಗ ಜನರ ಒತ್ತಾಯ ಹೆಚ್ಚಾದ ಹಿನ್ನೆಲೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಷಡ್ಯಂತ್ರದಿಂದ ಕಾಂಗ್ರೆಸ್ ಟಿಕೆಟ್ ತಪ್ಪಿದೆ. ನ್ಯಾಯಯುತವಾಗಿ ಟಿಕೆಟ್‌ಗೆ ಪ್ರಯತ್ನಿಸಬೇಕು. ಅದನ್ನು ಬಿಟ್ಟು ಮಹಿಳೆಯ ಮಾನ ಹರಾಜು ಹಾಕಿ ಟಿಕೆಟ್ ಪಡೆದರೆ ಒಳ್ಳೆಯದಾಗುತ್ತಾ?. ನನಗೂ ಕುಟುಂಬ ಇದೆತಾಯಿ ಹಾಗೂ ತಂದೆ ನೊಂದಿದ್ದಾರೆ. ನನ್ನ ನೋವು ನಾನೇ ನುಂಗಿಕೊಂಡಿದ್ದೇನೆ. ನನಗೆ ಮರ್ಯಾದೆ ಮುಖ್ಯ, ರಾಜಕಾರಣ ಅಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪತಿ ನಿತಿನ್, ತಾಯಿ ಚಂದ್ರಿಬಾಯಿ, ತೇಜಸ್ ಸೇರಿದಂತೆ ಮತ್ತಿತರುದ್ದರು.