ಬೆಂಗಳೂರು: ರೈತರು, ಸಹಕಾರಿ ಸಂಸ್ಥೆ ಸದಸ್ಯರಿಗೆ ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರ ನೋಂದಣಿಯ ಗುರಿಯನ್ನು ಹೊಂದಲಾಗಿತ್ತು.ಇದೀಗ 36.50 ಲಕ್ಷ ಸದಸ್ಯರು ನೋಂದಾಯಿಸಿ, ಗುರಿ ಮೀರಿದ ಸಾಧನೆ ಮಾಡಲಾಗಿದೆ. ಮಾರ್ಚ್ 31ರವರೆಗೆ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಲಾಗಿದೆ. ಈ ಯೋಜನೆಯಡಿ 5 ಲಕ್ಷ ವರೆಗೆ ಆರೋಗ್ಯ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ.
ಈ ಬಗ್ಗೆ ಸಹಕಾರ ಇಲಾಖೆಯಿಂದ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರ ನಿಗದಿಪಡಿಸಿದಂತೆ ದಿನಾಂಕ 01-01-2023ರಿಂದಲೇ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 5,084 ಫಲಾನುಭವಿಗಳು ಅಂದಾಜು ರೂ.9.55 ಕೋಟಿ ಮೊತ್ತದ ಚಿಕಿತ್ಸೆಗಳನ್ನು ರಾಜ್ಯಾಧ್ಯಂತ ಪಡೆದಿದ್ದಾರೆ.
ಜನವರಿ 2023ರಿಂದ ಚಿಕಿತ್ಸೆಯನ್ನು ಪ್ರಾರಂಭಿಸಿದ ಅತ್ಯಲ್ಪ ಅವಧಿಯಲ್ಲೇ 5 ಸಾವಿರ್ಕಕೂ ಹೆಚ್ಚು ಫಲಾನುಭವಿಗಳು ಚಿಕಿತ್ಸೆ ಪಡೆದಿರುವುದು, ಈ ಯೋಜನೆಗೆ ದೊರೆತ ಅಭೂತಪೂರ್ವ ಸ್ಪಂದನೆ ಆಗಿರುತ್ತದೆ. ಸರ್ಕಾರವು ಫಲಾನುಭವಿಗಳ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚವನ್ನು ಫರಿಸಲು ಪ್ರಸಕ್ತ ಸಾಲಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನದ ಪೂರ್ಣ ಮೊತ್ತ ರೂ.100 ಕೋಟಿಗಳನ್ನು ಬಿಡುಗಡೆ ಮಾಡಿರುತ್ತದೆ. ಇಲ್ಲಿಯವರೆಗೆ ಸದಸ್ಯತ್ವ ನೊಂದಣಿ ವಂತಿಗೆ ರೂ.49.60 ಕೋಟಿ ಸಂಗ್ರಹಣೆ ಆಗಿರುತ್ತದೆ ಎಂದು ತಿಳಿಸಿದೆ.



