ದಾವಣಗೆರೆ: ಜಿಲ್ಲೆಯ ಚೀಲೂರು ಬಳಿ ನಡೆದಿದ್ದ ರೌಡಿಶೀಟರ್ ಕೊಲೆ ಪ್ರಕರಣದ ಆರೋಪಿಗಳಿಗೆ ನೆರವು ನೀಡಿದ್ದ ಆರೋಪದಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಧ್ಯಮ ಪ್ರತಿನಿಧಿಯನ್ನು ನ್ಯಾಮತಿ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ.
ಧಾರವಾಡದ ಮಾಧ್ಯಮ ಪ್ರತಿನಿಧಿ ಮೆಹಬೂಬ್ ಮುನವಳ್ಳಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಆಗುತ್ತಿದ್ದ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಆಂಜನೇಯ (30) ಹತ್ಯೆಯಾಗಿತ್ತು. ಇನ್ನೊಬ್ಬ ಮಧು ಗಾಯಗೊಂಡು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಇಬ್ಬರ ಮೇಲೆ ಗುಂಪೊಂದು ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಚೀಲೂರು ಬಳಿ ಕೊಲೆ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳ ಬಗ್ಗೆ ಮಾಹಿತಿ ತಿಳಿದಿದ್ದರೂ, ಪೊಲೀಸರ ತನಿಖೆಗೆ ಅಸಹಕಾರ ನೀಡಿದ ಮೆಹಬೂಬ್ ಮುನವಳ್ಳಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದ್ದಾರೆ.



