ದಾವಣಗೆರೆ: ನಗರದ ಹೊರ ವಲಯದ ಎಲೆಬೇತೂರು ರಸ್ತೆಯಲ್ಲಿರುವ ಹಳ್ಳದ ಸೇತುವೆಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ. ಇದರ ಪರಿಣಾಮ ಸುಮಾರು 20ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಇಂದು (ಮಾ13) ಬೆಳಗ್ಗೆ ನಡೆದಿದೆ.
ಜಗಳೂರು ಕಡೆಯಿಂದ ದಾವಣಗೆರೆ ಕಡೆ ಬರುತ್ತಿದ್ದ ಖಾಸಗಿ ಬಸ್ ಎಲೆಬೇತೂರು ಸಮೀಪ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಒಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಲ್ಟಿಯಾಗಿದ್ದ ಬಸ್ನಲ್ಲಿದ್ದ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಗಾಜು ಒಡೆದು ಕಿಟಕಿಯಿಂದ ಹೊರ ಬಂದಿದ್ದಾರೆ.
ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಪ್ರಯಾಣಿಕರನ್ನು ರಕ್ಷಿಸಲು ಸ್ಥಳೀಯರು ಹರಸಾಹಸಪಟ್ಟರು. ಬಸ್ ದಾವಣಗೆರೆ ಜಿಲ್ಲೆಯ ಜಗಳೂರಿನ ಮೂಲಕ ಪ್ರಯಾಣಿಕರನ್ನು ಹೊತ್ತು ದಾವಣಗೆರೆ ನಗರಕ್ಕೆ ಆಗಮಿಸುತ್ತಿತ್ತು. ಈ ವೇಳೆ ದುರಂತ ಘಟಿಸಿದೆ.
ಬೇತೂರು ರಸ್ತೆ ದಾಟಿ ಮುಂದೆ ಬರುತ್ತಿದ್ದಂತೆ ಸಣ್ಣ ಹಳ್ಳಕ್ಕೆ ಕಟ್ಟಲಾದ ಸೇತುವೆಗೆ ಬಸ್ ಡಿಕ್ಕಿಯಾಗಿದೆ. ಹೀಗಾಗಿ ಸೇತುವೆ ಪಕ್ಕದಲ್ಲಿಯೇ ಪಲ್ಟಿಯಾಗಿದೆ. ಒಂದು ವೇಳೆ ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು.ದಾವಣಗೆರೆ ಅಜಾದ್ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.