ದಾವಣಗೆರೆ: ನಗರದಲ್ಲಿ ಎರಡು ಪ್ರತ್ಯೇಕ ಭೀಕರ ಕಾರು, ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಭಿಷೇಕ್ (18) ಮತ್ತು ಶ್ರೀನಿವಾಸ್ (31) ಮೃತಪಟ್ಟ ದುರ್ದೈವಿಗಳು. ಹುಲಿಗೇಶ್ (16) ಅಪಘಾತದಲ್ಲಿ ಗಾಯಗೊಂಡ ಬಾಲಕ. ದ್ವಿಚಕ್ರ ವಾಹನವನ್ನು ಅತಿವೇಗದಿಂದ ಚಾಲನೆ ಮಾಡುತ್ತಿದ್ದಾಗ ಹದಡಿ ರಸ್ತೆಯ ಗ್ರಾಮಾಂತರ ಠಾಣೆಯ ಬಳಿಯಿರುವ ಡಿವೈಡರ್‌ಗೆ ಗುದ್ದಿದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ
ಅಭಿಷೇಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಹುಲಿಗೇಶಿ ಎಂಬ ಬಾಲಕನಿಗೂ ಗಂಭೀರ ಗಾಯಗಳಾಗಿದ್ದು ಪ್ರಾಣಾಪಾಯದಿಂದಪಾರಾಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಚಿಂತಾಮಣಿಯ ಶ್ರೀನಿವಾಸ್ ಎಂಬ ಯುವಕ ಕಾರು ಚಾಲನೆ ಮಾಡಿಕೊಂಡು ಧಾರವಾಡಕ್ಕೆ ಹೋಗುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 48ರ ಹೊಸ ಕುಂದುವಾಡ ಬಳಿ ಬೊಲೆರೊ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕಾರಲ್ಲಿದ್ದ ಮತ್ತೊಬ್ಬ ಗಾಯಗಳಾಗಿವೆ. ಎರಡು ಪ್ರಕರಣಗಳು ದಕ್ಷಿಣಸಂಚಾರಿ ಠಾಣೆಯಲ್ಲಿ ದಾಖಲಾಗಿವೆ.



