ದಾವಣಗೆರೆ; ಲೋಕಾಯುಕ್ತ ದಾಳಿ ಪ್ರಕರಣದ ನಂತರ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾಡಾಳ್ ಗ್ರಾಮದಲ್ಲಿ ಪ್ರತ್ಯಕ್ಷರಾದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವಾಗ ಗಳಗಳನೆ ಅತ್ತು ಕಣ್ಣೀರು ಹಾಕಿದರು.
ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ಜೀವ ಇರೋ ವರೆಗೂ ನನ್ನ ಕ್ಷೇತ್ರದ ಜನರಿಗಾಗಿ ದುಡಿಯುತ್ತೇನೆ ಎನ್ನುತ್ತಲೇ ಭಾವುಕರಾಗಿ ಗಳಗಳನೆ ಅತ್ತು ಕಣ್ಣೀರು ಹಾಕಿದರು. ಇದು ಸಂಭ್ರಮಾಚರಣೆ ಅಲ್ಲ, ನನ್ನನ್ನು ಜನರು ಪ್ರೀತಿಯಿಂದ ನೋಡಲು, ಮಾತನಾಡಿಸಲು ಬಂದಿದ್ದಾರೆ. ಇದು ನನ್ನ ಮತ್ತು ಜನರ ನಡುವಿನ ಸಂಬಂಧ ತೋರಿಸುತ್ತದೆ. ನಾನು ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ ಎಂದರು.
ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನಾನು ಚನ್ನಗಿರಿ ಬಿಟ್ಟು ಎಲ್ಲೂ ಹೋಗಿಲ್ಲ. ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜನ ಸಂಪರ್ಕದಿಂದ ದೂರ ಇದ್ದೆ. ದೋಷಮುಕ್ತನಾಗಿ ನಾನು ಹೊರಬರುತ್ತೇನೆ. ನನ್ನದು ಅಡಿಕೆ ತೋಟ, ಅಡಿಕೆ ಮಂಡಿಯೂ ಇದೆ. ಈಗ ಸಿಕ್ಕಿರೋ ಕೋಟ್ಯಾಂತರ ರೂಪಾಯಿ ದುಡ್ಡೆಲ್ಲಾ ಅಕೌಂಟೆಟ್ ಹಣವಾಗಿದೆ. ಸೂಕ್ತ ದಾಖಲೆಗಳನ್ನ ಕೊಟ್ಟು ನನ್ನ ಹಣವನ್ನ ನಾವು ವಾಪಸ್ ಪಡೆಯುತ್ತೇವೆ ಎಂದರು.
ನಮ್ಮದು ಅಡಿಕೆ ಸೀಮೆ, ನಮ್ಮಲ್ಲಿ ಅಡಿಕೆ ವ್ಯಾಪಾರಸ್ಥರ ಮನೆಯಲ್ಲಿ ಹಣ ಇರುವುದು ಸಾಮಾನ್ಯ. ಲೋಕಾಯುಕ್ತ ವಶಪಡಿಸಿಕೊಂಡ ಹಣಕ್ಕೆ ಸೂಕ್ತ ದಾಖಲೆ ನೀಡುತ್ತೇನೆ ಎಂದರು.



