ಬೆಂಗಳೂರು: 80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 40 ಲಕ್ಷ ಲಂಚದ ಹಣ ಪಡೆಯುತ್ತಿದ್ದಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಇಂದು (ಮಾ.02) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಗುತ್ತಿಗೆದಾರರೊಬ್ಬರು ಕೆ ಎಸ್ ಡಿ ಎಲ್ ಗೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಲು ಟೆಂಡರ್ ಗಾಗಿ ಅರ್ಜಿ ಸಲ್ಲಿಸಿದ್ದರು.ಈ ಗುತ್ತಿಗೆಯನ್ನು ಕೊಡಿಸೋದಕ್ಕಾಗಿ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವಂತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಹಾಗೂ ಬಿಡಬ್ಲ್ಯೂ ಎಸ್‌ಎಸ್ ಬಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್ 80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಗುತ್ತಿಗೆದಾರರು ದೂರು ನೀಡಿದ್ದರು. 80 ಲಕ್ಷಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 40 ಲಕ್ಷ ಲಂಚದ ಹಣವನ್ನು ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವಂತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿಯಲ್ಲಿ ಪುತ್ರ ಪ್ರಶಾಂತ್ ಗೆ ನೀಡೋದಕ್ಕೆ ತೆರಳಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ, 40 ಲಕ್ಷ ಹಣದೊಂದಿಗೆ ಶಾಸಕರ ಪುತ್ರನನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ.



