ದಾವಣಗೆರೆ: ಏಳನೇ ವೇತನ ಆಯೋಗ, ಹಳೇ ಪಿಂಚಣಿ ಪದ್ಧತಿ ಮರು ಜಾರಿಗೊಳಿಸುವಂತೆ ಆಗ್ರಹಿಸಿ ಇಂದು (ಮಾ.01) ರಾಜ್ಯ ಸರ್ಕಾರ ನೌಕರರ ಸಂಘದ ಕರೆ ನೀಡಿದ್ದ ಮುಷ್ಕರಕ್ಕೆ ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಆಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಜಿಲ್ಲಾಸ್ಪತ್ರೆಯ ತುರ್ತು ಸೇವೆ, ರಕ್ತ ಭಂಡಾರ, ಐಸಿಯು ಸೇರಿದಂತೆ ಅತಿ ಅಗತ್ಯವಾಗಿ ಬೇಕಾದ ಚಿಕಿತ್ಸೆಗಳನ್ನು ಹೊರತುಪಡಿಸಿದಂತೆ ಯಾವುದೇ ಚಿಕಿತ್ಸೆಗಳು ಲಭ್ಯ ಇರಲಿಲ್ಲ. ಹೊರರೋಗಿಗಳ ವಿಭಾಗ ತೆರೆದಿರಲಿಲ್ಲ. ಸರ್ಕಾರಿ ಶಾಲೆ ಶಿಕ್ಷಕರು ಸೇರಿದಂತೆ ಎಲ್ಲಾ ಇಲಾಖೆ ನೌಕರರು ಮುಷ್ಕರದಲ್ಲಿ ಭಾಗಗಿಯಾಗಿದ್ದರು. ಜಿಲ್ಲಾ ಆಸ್ಪತ್ರೆ ಮುಂದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮುಷ್ಕರ ನಿರತನೌಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ, ಜಿಲ್ಲಾ ಎಲ್ಲಾ ನೌಕರರು ಮುಷ್ಕರಕ್ಕೆ ಕೈ ಜೋಡಿಸಿದ್ದಾರೆ. ನಾವು ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಈ ಪ್ರತಿಭಟನೆ ಕೈಗೊಂಡಿದ್ದೇವೆ. ಕಳೆದ ತಡೆ ರಾತ್ರಿವರೆಗೂ ನಮ್ಮ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ಕರೆಯಲಾಗಿತ್ತು ಆದರೆ ಯಾವುದೇ ಫಲಶೃತಿ ಕಾಣದ ಹಿನ್ನೆಲೆಯಲ್ಲಿ ನಾವು ಇಂದಿನಿಂದ ನಮ್ಮ ಎಲ್ಲಾ ಕರ್ತವ್ಯಗಳಿಗೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸುತ್ತಿದ್ದೇವೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಆದೇಶ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲ. 7ನೇ ವೇತನ ಅಯೋಗದ ವರದಿ ಜಾರಿ, ಹಳೇ ಪಿಂಚಣಿ ಮರು ಜಾರಿ ಮಾಡುವುದಾಗಿ ಆದೇಶ ಹೊರಡಿಸಿದ ನಂತರವೇ ನಾವು ಮತ್ತೆ ಕರ್ತವ್ಯಕ್ಕೆ ಹಾಜರಿ ಆಗುತ್ತವೆ ಎಂದರು.
ಜಿಲ್ಲಾಸ್ಪತ್ರೆ ಪ್ರತಿಭಟನೆ ನಂತರ ಪಿಯುಸಿ ಮೌಲ್ಯಮಾಪನ ನಡೆಯುತ್ತಿದ್ದ ಡಿಆರ್ ಆರ್ ಪಾಲಿಟೆಕ್ನಿಕ್ ಕಾಲೇಜಿಗೆ ತೆರಳಿದರು. ಆದರೆ ಯಾರೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮುಷ್ಕರಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.



