ದಾವಣಗೆರೆ; ಜಿಲ್ಲೆಯ ಹರಿಹರದ ದಕ್ಷಿಣ ಕಾಶಿ ಖ್ಯಾತಿಯ ಶ್ರೀ ಹರಿಹರೇಶ್ವರನ ಬ್ರಹ್ಮ ರಥೋತ್ಸವ ಫೆ. 5ರಂದು ಅದ್ಧೂರಿಯಾಗಿ ನಡೆಯಲಿದ್ದು, ಸಕಲ ಸಿದ್ಧತೆ ನಡೆಯುತ್ತಿದೆ.
ಫೆ. 5ರಂದು ಮಾಘ ಮಾಸದ ಶುಕ್ಲ ಭಾರತ ಹುಣ್ಣಿಮೆಯಂದು ರಥೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 10.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಹರಿಹರೇಶ್ವರನ ಬ್ರಹ್ಮರಥೋತ್ಸವ
ಜರುಗಲಿದೆ. ಪಲ್ಲಕ್ಕಿಯಲ್ಲಿ ಹರಿಹರೇಶ್ವರ ದೇವರ ಉತ್ಸವ ಮೂರ್ತಿ ಕರೆತಂದು ತೇರುಗಡ್ಡೆ ವೃತ್ತದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಭಕ್ತರು ಗೋವಿಂದ, ಗೋವಿಂದ, ಹರ ಹರ ಮಹದೇವ ಘೋಷದೊಂದಿಗೆ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ರಥೋತ್ಸವಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ನಗರದ ವಿವಿದ ಸಂಘ-ಸಂಸ್ಥೆಗಳು ಭಕ್ತರಿಗೆ ಉಚಿತವಾಗಿ ಮಜ್ಜಿಗೆ, ಪಾನಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಭಕ್ತಿಯ ಸೇವೆ ಇರುತ್ತದೆ. ಮೂರು ದಿನಗಳ ಕಾಲ ದೇವಸ್ಥಾನ ರಸ್ತೆಯಲ್ಲಿ ಜಾತ್ರೆ ನಡೆಯಲಿದೆ.
ಹರಿ ಮತ್ತು ಹರ ದೇವರಿಬ್ಬರೂ ಒಂದೆ ದೇಹಿಯಾಗಿ ಇರುವುದು ಇಲ್ಲಿಯ ಮೂರ್ತಿಯ ವಿಶೇಷತೆಯಾಗಿದೆ. ಈ ದೇವಸ್ಥಾನದ ಕಾರಣದಿಂದಲೇ ಈ ನಗರಕ್ಕೆ ಹರಿಹರ ಹೆಸರು ಬಂದಿದೆ. ಇನ್ನೂ ಪುರಾಣದ ಪ್ರಕಾರ ದೇವ, ದೇವತೆಗಳಿಗೆ ಕಂಟಕನಾಗಿದ್ದ ಗುಹಾಸುರನೆಂಬ ರಾಕ್ಷಸನ ವಧೆಗಾಗಿ ಹರಿ ಮತ್ತು ಹರ ಜೊತೆಗೂಡಿ ಹರಿಹರ ಸ್ವಾಮಿಯ ಅವತಾರ ಎನ್ನಲಾಗುತ್ತೆ. ಹರಿಹರೇಶ್ವರ ಮೂರ್ತಿಯು ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ ಕೂಡಿ ಹರಿಹರೇಶ್ವರವಾಗಿದೆ. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು 7 ಅಡಿಯ ಏಕಶಿಲಾ ವಿಗ್ರಹವಾಗಿದೆ.1224ರಲ್ಲಿ ಹೊಯ್ಸಳ ದೊರೆ 2ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಳಾಲ್ವನು ಈ ದೇವಾಲಯ ನಿರ್ಮಿಸಿರುವ ಉಲ್ಲೇಖವಿದೆ.



