ಡಿವಿಜಿ ಸುದ್ದಿ, ದಾವಣಗೆರೆ : ಕೃಷಿ ಉತ್ಪನ್ನಗಳ ಧಾರಣೆಗಳು ಯಾವಾಗಲು ಸ್ಥಿರವಾಗಿರಲಿ. ಇದರಿಂದ ಬೆಳೆ ಬೆಳೆದ ರೈತರು ಹಾಗೂ ವರ್ತಕರಿಗೂ ಅನುಕೂಲವಾಗಲಿದೆ. ಹಾಗೆಯೇ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ವರ್ತಕರು ಕೃಷಿ ಉತ್ಪನ್ನ ಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿಂದು ನಡೆದ ಕೃಷಿ ಉತ್ಪನ್ನಗಳ ಧಾರಣೆ ಸ್ಥಿರತೆ ಕುರಿತ ಸಭೆಯಲ್ಲಿ ರೈತರು, ವರ್ತಕರು ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಯಾವುದೇ ಕೃಷಿ ಉತ್ಪನ್ನ ಕೊಳ್ಳಲು ರೈತರಿಗೆ ನೀಡಿರುವ ‘ಪ್ರೂಟ್ಸ್’ ತಂತ್ರಾಂಶದಲ್ಲಿ ನೀಡಲಾಗುವ ದಾಖಲಾತಿ ಇದ್ದರೆ ಸಾಕು. ಅದನ್ನು ಕೃಷಿ ಇಲಾಖೆ ಆ ಹಂಗಾಮಿಗೆ ದೃಢೀಕರಣ ನೀಡಿರುತ್ತದೆ. ಮತ್ತೆ ಬೇರೆ ದಾಖಲೆಗಳ ಅಗತ್ಯವಿರುವುದಿಲ್ಲ. ರೈತರು ಕೂಡ ಯೋಗ್ಯ ಉತ್ಪನ್ನಗಳನ್ನು ವರ್ತಕರಿಗೆ ನೀಡಬೇಕು ಎಂದರು.
ರೈಸ್ ಮಿಲ್ ಮಾಲೀಕರ ಆಸ್ತಿ ಮುಟ್ಟುಗೋಲು
ಈ ಹಿಂದಿನ ವರ್ಷಗಳಲ್ಲಿ ಹಲವಾರು ರೈಸ್ ಮಿಲ್ ಮಾಲೀಕರು ಭತ್ತ ಖರೀದಿಸಿ ರೈತರಿಗೆ ಹಣ ಪಾವತಿಸಿಲ್ಲ ಎಂಬ ದೂರುಗಳಿವೆ. ಸುಮಾರು 4-5 ಕೋಟಿಗಳಷ್ಟು ಮೋಸವಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ಆಸ್ತಿ ಜಪ್ತಿ ಮಾಡಿ ರೈತರಿಗೆ ಹಣ ಕೊಡಿಸಲು ಹಿಂದು-ಮುಂದು ನೋಡುವುದಿಲ್ಲ ಎಂದರು.
ವರ್ತಕರ ಸಂಘದ ಪ್ರತಿನಿಧಿ ಮಾತನಾಡಿ, ಸುಗ್ಗಿ ಕಾಲದಲ್ಲಿ ಧಾನ್ಯಗಳಲ್ಲಿ 25 ರಿಂದ 26 ರಷ್ಟು ತೇವಾಂಶವಿರುತ್ತದೆ. ಹಾಗಾಗಿ ಅಂತಹ ದಿನಗಳಲ್ಲಿ ಮಾರುಕಟ್ಟೆ ಬೆಲೆಗೆ ಕೊಂಡರೆ ಅದು ಒಣಗುವಷ್ಟರಲ್ಲಿ ಮಾಲೀಕರಿಗೆ ಹಾನಿಯಾಗುತ್ತದೆ. ಹಾಗಾಗಿ ಕೊನೆ ಪಕ್ಷ 15 ರಿಂದ 16 ರಷ್ಟು ತೇವಾಂಶ ಇದ್ದರೆ ಪರವಾಗಿಲ್ಲ ಎಂದರು..
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಈಗಾಗಲೇ ಎಲ್ಲರೂ ಕೃಷಿ ಉತ್ಪನ್ನಗಳನ್ನು ಒಣಗಿಸಲು ಡ್ರೈಯರ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಅವುಗಳ ಮೂಲಕ ಧಾನ್ಯಗಳನ್ನು ಒಣಗಿಸುತ್ತಾರೆ. ಹಾಗಾಗಿ ಅಷ್ಟೊಂದು ತೇವಾಂಶವಿರುವುದಿಲ್ಲ. ಕೃಷಿ ಬೆಲೆ ಆಯೋಗವು ಭತ್ತ ಬೆಳೆದ ರೈತರಿಗೆ ಕ್ವಿಂಟಾಲ್ ಗೆ 2,250/- ರೂ ಖರ್ಚು ಬರಲಿದೆ ಎಂದು ತಿಳಿಸಿದೆ. ಆದರೆ ಮಾರುಕಟ್ಟೆಯಲ್ಲಿ 1,800 ರಿಂದ 1,900 ರೂಪಾಯಿ ಬೆಲೆ ಇರುತ್ತದೆ. ಹಾಗಿದ್ದಾಗ ಈ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದರೆ ರೈತರಿಗೆ ನಷ್ಟವಾಗುತ್ತದೆ ರೈತರ ಹೊಲಗಳಿಗೆ ಬಂದು ಬೆಳೆ ಖರೀದಿಸುವುದಕ್ಕಿಂತ ಎಪಿಎಂಸಿ ಆವರಣದಲ್ಲಿ ಟೆಂಡರ್ ಮುಖಾಂತರ ಖರೀದಿಸುವುದು ಒಳ್ಳೆಯದು ಹಾಗೂ ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ ಎಂದರು .
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್, ಕಾರ್ಯದರ್ಶಿ ಪ್ರಭು, ರೈತ ಮುಖಂಡರುಗಳಾದ ಕೆಂಗೋ ಹನುಮಂತಪ್ಪ, ಬಸವರಾಜಪ್ಪ, ಪಾಮೇನಹಳ್ಳಿ ಲಿಂಗರಾಜು, ದಿಳ್ಯಪ್ಪ ಮುಂತಾದವರಿದ್ದರು.



