ದಾವಣಗೆರೆ: ವಿಜಯನಗರ ಜಿಲ್ಲೆಯ ಕೊಟ್ಟೂರಲ್ಲಿ ಜ.28ರಿಂದ ಫೆ.5ರವರೆಗೆ 75ನೇ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಯಲಿದ್ದು, ದಾವಣಗೆರೆ ಶಿವಸೈನ್ಯದಿಂದ ಬೃಹತ್ ಕಾರು, ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ಹುಣ್ಣಿಮೆ ಮಹೋತ್ಸವಕ್ಕೆ ಅದ್ಧೂರಿ ಸ್ವಾಗತ ನೀಡುವ ಸಂಬಂಧ ಜ.28ರಂದು ದಾವಣಗೆರೆಯಿಂದ ಕೊಟ್ಟೂರುವರೆಗೆ 4 ಸಾವಿರ ಬೈಕ್ ಹಾಗೂ 500 ಕಾರುಗಳ ರ‍್ಯಾಲಿ ನಡೆಯಲಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡರ ಪೂರ್ವಭಾವಿಯಲ್ಲಿ ಈ ನಿರ್ಧರ ಕೈಗೊಳ್ಳಲಾಯಿತು.
ಜ.28 ರಂದು ಬೆಳಿಗ್ಗೆ 8ಗಂಟೆಗೆ ದಾವಣಗೆರೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಉಪಾಹಾರ ಬಳಿಕ ಬೈಕ್ ರ‍್ಯಾಲಿ ಆರಂಭಿಸಿ ಸಿರಿಗೆರೆ ತರಳಬಾಳು ಮಠಕ್ಕೆ ತೆರಳಿ, ಅಲ್ಲಿಂದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೊಂದಿಗೆ ರ‍್ಯಾಲಿ ಮುಂದುವರಿಸಲಾಗುವುದು. ಭರಮಸಾಗರ, ಬಿಳಿಚೋಡು, ಪಲ್ಲಾಗಟ್ಟೆ ಮಾರ್ಗವಾಗಿ ದಿದ್ದಿಗೆ ತಲುಪಿ ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಬಸವನಕೋಟೆ ಮೂಲಕ ಕೊಟ್ಟೂರು ತಲುಪಲು ನಿರ್ಧರಿಸಲಾಗಿದೆ.
ರ‍್ಯಾಲಿಯಲ್ಲಿ ಬರುವ ಭಕ್ತರಿಗೆ 4 ಸಾವಿರ ಧ್ವಜ ನೀಡಲಾಗುವುದು. ಮಹೋತ್ಸವ ಅಂತಿಮ ದಿನವಾದ ಫೆ.5ರಂದು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿಗರೆಯಲು ಸಹ ನಿರ್ಧರಿಸಲಾಗಿದೆ. ಒಂಬತ್ತು ದಿನಗಳ ಕಾಲ ನಡೆಯುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ನಿತ್ಯವೂ ದಾವಣಗೆರೆಯಿಂದ ಕೊಟ್ಟೂರಿಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ವ್ಯವಸ್ಥೆ ಇರಲಿದೆ ಎಂದು ಎಂದು ಶಿವಸೈನ್ಯ ಸಂಘದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಅಣಬೇರು ಜೀವನಮೂರ್ತಿ, ಶಿವಗಂಗಾ ಬಸವರಾಜ್, ಧನಂಜಯ ಕಡ್ಲೇಬಾಳ್, ಬಿ.ಜೆ. ರಮೇಶ್, ರಾಮಗೊಂಡನಹಳ್ಳಿ ಜಯಣ್ಣ, ಕಬ್ಬೂರು ಪ್ರಕಾಶ್, ಬಿಸಲೇರಿ ಗಂಗಣ್ಣ, ಕರೇಕಟ್ಟೆ ನಾಗರಾಜಪ್ಪ, ಬಿ.ಜಿ.ಸಂಗನಗೌಡ್ರು, ಬಾತಿ ವೀರೇಶ್, ಅಗಸನಕಟ್ಟೆ ಲಿಂಗರಾಜ್, ಸುನಿಲ್ ದಾಸಪ್ಪ ಮತ್ತಿತರರು ಇದ್ದರು.



