ಡಿವಿಜಿ ಸುದ್ದಿ, ದಾವಣಗೆರೆ : ಭಾರತೀಯ ಮೋಟಾರು ವಾಹನ ಕಾಯ್ದೆ ಅನುಸಾರ ವಾಹನಗಳಿಗೆ ಹಾಲೋಗ್ರಾಮ್ ಮತ್ತು ಐಎನ್ ಡಿ ನೇಮ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ 1 ಸಾವಿರ ರೂಪಾಯಿ ದಂಡ ಮತ್ತು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇಂದು ವಾಹನ ನೋಂದಣಿ ಫಲಕಗಳ ಕಾನೂನು ಕುರಿತು ಏರ್ಪಡಿಸಿಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು, ಇಂದಿನಿಂದಲೇ ನೂತನ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದರು.
ವಾಹನ ಸವಾರರು ನೋಂದಣಿ ಫಲಕಗಳನ್ನು ತಮ್ಮ ಸ್ವ-ಇಚ್ಚೆಯಂತೆ ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತದ ಸಂದರ್ಭದಲ್ಲಿ ವಾಹನಗಳ ನೋಂದಣಿ ಪತ್ತೆ ಹಚ್ಚುವುದು ಕಷ್ಟವಾಗಿದ್ದು, ಭಾರತೀಯ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಈ ಕಾರಣದಿಂದ ಇನ್ನು ಮುಂದೆ ಪ್ರತಿಯೊಬ್ಬ ವಾಹನ ಸವಾರರು ಭಾರತೀಯ ಮೋಟಾರು ವಾಹನ ಕಾಯ್ದೆ ಅನ್ವಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಾಹನ ನೋಂದಣಿ ಸಂಖ್ಯೆಯ ಫಲಕದ ಗುರುತಿನ ಅಕ್ಷರಗಳು ಆಂಗ್ಲ ಭಾಷೆ ಮತ್ತು ಅಂಕಿಗಳು ಹಿಂದೂ ಅರೇಬಿಕ್ ಸಂಖ್ಯೆಯಲ್ಲಿರಬೇಕು. ವಾಹನವು ಹಿಂಬದಿ ಮತ್ತು ಮುಂಬದಿ ನೋಂದಣಿ ಫಲಕ ಹೊಂದಿರಬೇಕು. ನೋಂದಣಿ ಫಲಕದ ಅಳತೆ 1.0 ಎಂ.ಎಂ ಇರಬೇಕು. ಅಲ್ಯೂಮಿನಿಯಂ ಲೋಹದಿಂದ ಮಾಡಿದ್ದಾಗಿರಬೇಕು. ಐ.ಎಸ್.ಓ 759 ಮಾದರಿಯಲ್ಲಿ ರಚಿತವಾಗಿರಬೇಕು. ಅದರ ಅಂಚುಗಳು ಹಾಳಾಗದಂತೆ 10 ಎಂ.ಎಂ ದುಂಡಾಕಾರವಾಗಿ ಮಾಡಿಸಬೇಕು ಎಂದು ತಿಳಿಸಿದರು.
ವಾಹನಗಳ ನಂಬರ್ ಪ್ಲೇಟ್ ಗಾತ್ರ
ಬೈಕ್, ಆಟೋ: 200× 100 ಎಂ.ಎಂ
ಕಾರು: 500× 200 ಎಂ.ಎಂ
ಲಘು ಮತ್ತು ಭಾರಿ ಗಾತ್ರದ ವಾಹನ: 340×200 ಎಂ.ಎಂ
ಅಕ್ಷರಗಳ ಗಾತ್ರ
ಬೈಕ್ ಮತ್ತು ಆಟೋ ಮತ್ತು ಕಾರು: ಮುಂಭಾಗ 35 ಎಂ.ಎಂ ಎತ್ತರ, 7 ಎಂ.ಎಂ ದಪ್ಪ, ಹಿಂಭಾಗ 40 ಎಂ.ಎಂ ಎತ್ತರ, 7 ಎಂ.ಎಂ ದಪ್ಪ
ನಂಬರ್ ಪ್ಲೇಟ್ ಗಳಲ್ಲಿ ಅಲಂಕಾರಿಕ ಅಕ್ಷರ, ಚಿತ್ರ, ದೇವರ ಚಿತ್ರ ಹಾಕುವುದನ್ನು ನಿಷೇಧಿಸಲಾಗಿದೆ. ವಾಹನ ಸವಾರರು ನಂಬರ್ ಪ್ಲೇಟ್ ತಯಾರಿಸುವ ಸಮಯದಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.



