ಬೆಂಗಳೂರು: ರೈತರು, ಸಹಕಾರಿ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲು ನಿರ್ಧಾರಿಸಿದೆ. ಯಶಸ್ವಿನಿ ಯೋಜನೆ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಲಕ್ಷಾಂತರ ರೈತರು ಇನ್ನೂ ನೋಂದಣಿ ಮಾಡಿಸಿಕೊಂಡಿಲ್ಲ. ಹೀಗಾಗಿ ದಿನಾಂಕ ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಗ್ರಾಮೀಣ ಸಹಕಾರ ಸಂಘಗಳ, ಸ್ವ-ಸಹಾಯ ಗುಂಪುಗಳ ಗರಿಷ್ಟ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವಾರ್ಷಿಕ ರೂ.500/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.100/-ಗಳನ್ನು ಪಾವತಿಸಬೇಕು. ನಗರ ಸಹಕಾರ ಸಂಘಗಳ ಗರಿಷ್ಠ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ರೂ.1,000/- ಗಳ ವಂತಿಗೆ ಮತ್ತು ಹೆಚ್ಚುವರಿ ಪ್ರತಿಯೊಬ್ಬ ಸದಸ್ಯರಿಗೆ ರೂ.200/- ಗಳನ್ನು ಪಾವತಿಸಬೇಕು. ಸದಸ್ಯರ ಆಧಾರ ಕಾರ್ಡ್ ನಕಲಿ ಪ್ರತಿ ಹಾಗೂ ಎರಡು ಫೋಟೋ ಗಳ ದಾಖಲೆ ಸಲ್ಲಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.
ನೋಂದಣಿ ಮಾಡಿಕೊಂಡ ನಂತರ ಸಹಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಆಸ್ಪತ್ರೆಯಲ್ಲಿ ವಾರ್ಷಿಕ ಗರಿಷ್ಠ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಬಹುದು. ಸದಸ್ಯರಿಗೆ 2023 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿ ನಂತರ ಮತ್ತೆ ಶುಲ್ಕ ಪಾವತಿಸಿ ನೋಂದಣಿ ಮಾಡಮಾಡಿಕೊಳ್ಳಬೇಕಾಗಿದೆ
ಇನ್ನೂ ಅನೇಕ ರೈತರು ನೋಂದಣಿ ಮಾಡಿಸಿಕೊಂಡಿಲ್ಲ. ರಾಜ್ಯದಲ್ಲಿ ಸುಮಾರು 45,000 ವಿವಿಧ ರೀತಿಯ ಸಹಕಾರ ಸಂಘಗಳಿದ್ದು 2.30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಇವರಲ್ಲಿ 30 ಲಕ್ಷ ಸದಸ್ಯರನ್ನು ಯಶಸ್ವಿನಿ ಯೋಜನೆಗೆ ನೋಂದಾಯಿಸುವ ಗುರಿ ಹೊಂದಿದ್ದು, ಸುಮಾರು 20 ಲಕ್ಷ ನೋಂದಣಿ ಮಾಡಲಾಗಿದೆ. ಯಶಸ್ವಿನಿ ಯೋಜನೆಗೆ ನೊಂದಣಿ ಮಾಡಿಸಿಕೊಳ್ಳಲು ಸಹಕಾರ ಸಂಘಗಳ ಷೇರುದಾರರಾಗಬೇಕಿದೆ.



