ದಾವಣಗೆರೆ: ಈ ಬಾರಿಯ ಹೊಸ ವರ್ಷಾಚರಣೆಗೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ನಿಯೋಜಿತ ಸ್ಥಳದಲ್ಲಿ ರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ರಸ್ತೆಯಲ್ಲಿ ಅತಿರೇಕದ ವರ್ತನೆ ಕಡಿವಾಣ ಹಾಕಲಾಗಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೋವಿಡ್ ರೂಪಾಂತರ ಹಿನ್ನಲೆ ಹೊಸ ವರ್ಷಾಚರಣೆಗೆ ಗುಂಪು, ಗುಂಪಾಗಿ ಜನ ಸೇರುವಂತಿಲ್ಲ. ನಿಗದಿತ ಸ್ಥಳದಲ್ಲಿ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ರಸ್ತೆಯಲ್ಲಿ ಕೂಗಾಟ, ಅತಿರೇಕದ ವರ್ತನೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯಾದ್ಯಂತ ಡಿಸೆಂಬರ್ 31ರ ಮಧ್ಯರಾತ್ರಿ 1ಗಂಟೆವರೆಗೆ ಮಾತ್ರ ಅವಕಾಶವಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.
ಹೊಸ ವರ್ಷಾಚರಣೆ ವೇಳೆ ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೆಡ್ಡಿಂಗ್ ಮಾಡುವುದು. ರಸ್ತೆಯಲ್ಲಿ ಕಿರುಚಾಟ, ಕೂಗಾಟ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು. ರಸ್ತೆ ಮಧ್ಯದಲ್ಲಿ ಕೇಕ್ ಕಟ್ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಕೊಡುವಂತಿಲ್ಲ. ಒಂದು ವೇಳೆ ಅತಿರೇಕದ ವರ್ತಿಸಿದರೆ ಅಂತಹವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಡಿ.31 ರಂದು ಸಂಜೆಯಿಂದಲೇ ಕಾರ್ಯಾಚರಣೆ ನಡೆಯಲಿದೆ. ಗುಂಪಾಗಿ ಹೋಗಿ ಗಲಾಟೆ ಮಾಡುವವರು ಕಂಡುಬಂದರೆ ಅವರನ್ನು ವಶಕ್ಕೆ ಪಡೆಯಲಾಗುವುದು. ಗೃಹ ರಕ್ಷಕ ದಳದ ಸಿಬ್ಬಂದಿ ಬಳಸಿಕೊಂಡು ಗಸ್ತು ಹೆಚ್ಚಿಸಲಾಗುವುದು. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜನರು ಮನೆಯೊಳಗೆ ಸಂಭ್ರಮಾಚಣೆ ಮಾಡಬೇಕು. ಹಿರಿಯ ನಾಗರಿಕರು ಹೊರಗೆ ಹೋಗಬಾರದು ಎಂದರು.
ಬಾರ್ , ಪಬ್ , ರೆಸ್ಟೋರೆಂಟ್ ಸಿಬ್ಬಂದಿ ಕಡ್ಡಾಯವಾಗಿ ಬೂಸ್ಟರ್ ಡೋಸ್ ಹಾಕಿಸಿಕೊಂಡಿರಬೇಕು. ಚಲನಚಿತ್ರಮಂದಿರದಲ್ಲಿ ಎನ್ 95 ಮಾಸ್ಕ್ ಹಾಕಬೇಕು. ದೇಹದ ಉಷ್ಣಾಂಶವನ್ನು ಎಲ್ಲಾ ಕಡೆಗಳಲ್ಲಿ ಪರೀಕ್ಷೆ ಮಾಡಬೇಕು. ಕೊರೊನಾ ಲಕ್ಷಣ ಕಂಡಲ್ಲಿ ಕೂಡಲೇ ಆಸ್ಪತ್ರೆಗೆ ಸೇರಿಸಬೇಕು ಎಂದು ಸೂಚನೆ ನೀಡಿದರು.



