ದಾವಣಗೆರೆ: ಪ್ರೀತಿಸುತ್ತಿದ್ದ ಯುವತಿಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಯವಾಗಿತ್ತು. ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ, ನಡು ರಸ್ತೆಯಲ್ಲಿಯೇ ಯುವತಿಯನ್ನು ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ಪಿಜೆ ಬಡಾವಣೆಯಲ್ಲಿ ನಡೆದಿದೆ. ಈ ಘಟನೆ ಇಡೀ ದಾವಣಗೆರೆ ಜನರನ್ನು ಬೆಚ್ಚಿಬೀಳಿಸುವಂತ್ತಿದೆ.
ವಿನೋಭನಗರದ ನಿವಾಸಿ ಚಾಂದ್ ಸುಲ್ತಾನಾ (24) ಕೊಲೆಯಾದ ಯುವತಿಯಾಗಿದ್ದಾರೆ. ಸಾದತ್ ಕೊಲೆ ಮಾಡಿದ ಯುವಕನಾಗಿದ್ದಾನೆ. ನಗರದ ಚರ್ಚ್ ರಸ್ತೆಯಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆ ನಡೆದಿದೆ. ಯುವತಿಯ ಕೊಲೆ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಯುವತಿ ಸ್ಕೂಟರ್ ನಲ್ಲಿ ಬಂದು ನಿಲ್ಲಿಸಿ ತನ್ನ ಯುವಕನ ಜತೆ ಮಾತನಾಡುತ್ತಿದ್ದಾಳೆ. ಏಕಾಏಕಿ ಚಾಕುವಿನಿಂದ ಯುವತಿಗೆ ಹಲವಾರು ಬಾರಿ ಇರಿದು ಯುವಕ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಕೆಲವರು ಹಲ್ಲೆ ನಡೆಸುತ್ತಿದ್ದನ್ನು ನೋಡುತ್ತಿದ್ದರೂ ರಕ್ಷಣೆಗೆ ಮುಂದಾಗಿಲ್ಲ. ಕೂಡಲೇ ಯುವಕ ಬೈಕ್ ನಲ್ಲಿ ನಾಪತ್ತೆಯಾಗಿದ್ದಾನೆ.
ನಗರದ ಪಿಜೆ ಬಡಾವಣೆಯ ಚರ್ಚ್ ರಸ್ತೆಯಲ್ಲಿ ಬೆಳಗ್ಗೆ 11.30ಕ್ಕೆ ಈ ಕೃತ್ಯ ನಡೆದಿದೆ. ಚಾಂದ್ ಸುಲ್ತಾನಾಳಿಗೆ 8 ತಿಂಗಳ ಹಿಂದೆ ಹರಿಹರ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು. ವಿವಾಹಕ್ಕೆ ವಿರೋಧಿಸಿ ಸುಲ್ತಾನಳನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.