ದಾವಣಗೆರೆ: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಮರ್ಪಿಸುವ 12ಲಕ್ಷ ವೆಚ್ಚದ 15 ಕೆಜಿ ತೂಕದ ಬೆಳ್ಳಿ ಇಟ್ಟಿಗೆಯನ್ನು ಪಿಜೆ ಬಡಾವಣೆಯ ರಾಘವೇಂದ್ರಸ್ವಾಮಿ ಮಠದಲ್ಲಿ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ನಂತರ ಮಾತನಾಡಿದ ಪೇಜಾವರ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, 2024ನೇ ವರ್ಷದ ಮಕರ ಸಂಕ್ರಾಂತಿ ವೇಳೆ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ದಾವಣಗೆರೆ ಭಕ್ತರು ಸೇರಿ ನಿರ್ಮಿಸಿದ ಬೆಳ್ಳಿ ಇಟ್ಟಿಗೆಯ ದರ್ಶನ ಮಾಡಿದ್ದೇವೆ. ಮುಂಬರುವ ದಿನದಲ್ಲಿ ಭಕ್ತರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ, ಸೂಕ್ತ ಮುಹೂರ್ತದಲ್ಲಿ ಬೆಳ್ಳಿ ಇಟ್ಟಿಗೆ ಸಮರ್ಪಣೆ ನಡೆಯಲಿ ಎಂದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಜನವರಿ 21ರ ನಂತರ ಭವ್ಯ ಕಾರ್ಯಕ್ರಮ ಮಾಡಿ ಶ್ರೀಗಳ ಮೂಲಕ ಭಕ್ತಿ ಸಮರ್ಪಿಸಲಾಗುವುದು ಎಂದರು.
ಮೇಯರ್ ಜಯಮ್ಮ ಗೋಪಿನಾಯ್ಕ, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ.ವೀರೇಶ್, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣೆಪ್ಪ, ಸೋಗಿ ಶಾಂತಕುಮಾರ್, ಮುಖಂಡರಾದ ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಜಯಮ್ಮ, ಗೌತಮ್ ಜೈನ್, ತರಕಾರಿ ಶಿವು ಇತರರಿದ್ದರು.



