ದಾವಣಗೆರೆ: ಆನ್ ಲೈನ್ ಶಾಪಿಂಗ್ ಕಂಪನಿ ಮೆಶೋ ದಿಂದ ಬಹುಮಾನ ಬಂದಿದೆ ಎಂದು ಬಿಟಿ ಲೇಔಟ್ ವಿದ್ಯಾರ್ಥಿನಿಯೊಬ್ಬರಿಗೆ 92 ಸಾವಿರ ವಂಚನೆ ನಡೆದಿರುವ ಘಟನೆ ನಡೆದಿದೆ.
ಊರ್ಮಿಳಾ ಕುಮಾರಿ ವಂಚನೆಗೆ ಒಳಗಾದ ಯುವತಿಯಾಗಿದ್ದು, ಆನ್ ಲೈನ್ ಶಾಪಿಂಗ್ ಕಂಪನಿ ಮೆಶೋದಿಂದ ಉಡುಗೊರೆ ಬಂದಿದೆ ಎಂದು ವಿದ್ಯಾರ್ಥಿನಿ ವಿಳಾಸಕ್ಕೆ ಪತ್ರ ಬಂದಿದೆ. ಆ ಪತ್ರದಲ್ಲಿ ಬಹುಮಾನ ರೂಪದಲ್ಲಿ ನಿಮಗೆ 7.50 ಲಕ್ಷ ಬಂದಿದೆ. ಬಹುಮಾನ ಹಣ ಬಿಡಿಸಿಕೊಳ್ಳಲು ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಆ ಪತ್ರ ನಂಬಿದ ವಿದ್ಯಾರ್ಥಿ ಕರೆ ಮಾಡಿ ವಿಚಾರಿಸಿದ್ದಾಗ ನಿಮಗೆ 7.50 ಲಕ್ಷ ಹಣ ಬಹುಮಾನ ಬಂದಿದೆ. ಹಣ ಬಿಡಿಸಿಕೊಳ್ಳಬೇಕಾದ್ರೆ ತೆರಿಗೆ ಕಟ್ಟಬೇಕು ಎಂದು ವಂಚಕರು ತಿಳಿಸಿದ್ದಾರೆ. ಇದಕ್ಕೆ ಯುವತಿ ಹಂತ ಹಂತವಾಗಿ 92 ಸಾವಿರ ಹಣ ಕಟ್ಟಿದ್ದಾರೆ. ಹಣ ವಾಪಸ್ ಬರದಿದ್ದಾಗ ಯುವತಿಗೆ ವಂಚನೆ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



