ದಾವಣಗೆರೆ: ವಿದ್ಯುತ್ ಶಾರ್ಟ್ ಸರ್ಕೀಟ್ನಿಂದ ನೋಡ ನೋಡುತ್ತಿದ್ದಂತೆ 20 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ತಾಲ್ಲೂಕಿನ ಕೊಳೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ನಂದಿಸಲು ಪ್ರಯತ್ನಿಸಿದರು. ಅಗ್ನಿ ಶಾಮಕ ದಳದ ಸಿಬ್ಬಂದಿ ಬರುವವರೆಗೆ ಅರ್ಧದಷ್ಟು ಕಬ್ಬು ಬೆಂಕಿಗೆ ನಾಶವಾಗಿದೆ.
ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಬಿದ್ದಿದೆ. ಬೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ತಂತಿಗಳು ಜೋತು ಬಿದ್ದ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ವಿದ್ಯುತ್ ತಂತಿಗಳ ನಿರ್ವಹಣೆ ಸರಿಯಿಲ್ಲ. ಆಗಾಗ ವಿದ್ಯುತ್ ಶಾರ್ಟ್ ಸರ್ಕೀಟ್ ಆಗುತ್ತಿದೆ. ಇದರಿಂದ ತೆಂಗು, ಅಡಿಕೆಗೂ ಹಾನಿಯಾಗುತ್ತಿದೆ. ಹದಡಿ ಮತ್ತು ಆರನೇ ಕಲ್ಲು ಗ್ರಾಮದ ಸುತ್ತಲೂ ಕಬ್ಬಿನ ಬೆಳೆಗೆ ಬೆಂಕಿಗೆ ಆಹುತಿಯಾಗಿದೆ.
ಕಬ್ಬಿನ ಬೆಳೆಯನ್ನು ಫಸಲ್ ಬಿಮಾ ವ್ಯಾಪ್ತಿಗೆ ತರಬೇಕು. ಬೆಂಕಿ ಅವಘಡ ಸಂಭಿಸಿದಾಗ ನಷ್ಟಕ್ಕೆ ಬೆಸ್ಕಾಂ ಹಾಗೂ ಸಕ್ಕರೆ ಕಾರ್ಖಾನೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.



