ದಾವಣಗೆರೆ: ಬ್ಯಾಂಕ್ ನೌಕರರು ಹಾಗೂ ಸಂಘಟನೆಗಳ ಮೇಲೆ ವಿವಿಧ ಬ್ಯಾಂಕುಗಳ ಆಡಳಿತ ಮಂಡಳಿಗಳು ಅವ್ಯಾಹತವಾಗಿ ನಡೆಸುತ್ತಿರುವ ಆಕ್ರಮಣಕಾರಿ ವರ್ತನೆ, ದ್ವಿಪಕ್ಷೀಯ ಒಪ್ಪಂದ ಹಾಗೂ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ, ಬ್ಯಾಂಕಿಂಗ್ ಕೆಲಸವನ್ನು ಹೊರಗುತ್ತಿಗೆ ನೀಡುವುದನ್ನು ಖಂಡಿಸಿ ಹಾಗೂ ಬ್ಯಾಂಕುಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಲು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು (All India Bank Employees Union) ನ. 19 ರಂದು ಒಂದು ದಿನದ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ ಎಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.
ಮುಷ್ಕರದ ಅಂಗವಾಗಿ ಅಂದು ಬೆಳಗ್ಗೆ 10 ಘಂಟೆಗೆ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಸ್.ಎಮ್.ಇ ಶಾಖೆಯ (ಐಟಿಐ ಕಾಲೇಜು ಪಕ್ಕ) ಮುಂಭಾಗ ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಎಲ್ಲ ಸದಸ್ಯರು, ನಿವೃತ್ತ ಬ್ಯಾಂಕ್ ಉದ್ಯೋಗಿಗಳು ಹಾಗೂ ಪಿಗ್ಮಿ ಸಂಗ್ರಹಕಾರರು ಮುಷ್ಕರದಲ್ಲಿ ಭಾಗವಹಿಸಲು ಕರೆ ನೀಡಿದ್ದಾರೆ.



