ದಾವಣಗೆರೆ: ರಾಜ್ಯದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಜಗದೀಶ್ (32) ಎಂಬಾತನನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಲ ಮಹಿಳೆಯರು ನೀಡಿದ್ದ ಮಾಹಿತಿ ಆಧರಿಸಿ ಡಾ.ಪದ್ಮಿನಿ ಪ್ರಸಾದ್ ಅವರು ಠಾಣೆಗೆ ದೂರು ನೀಡಿದ್ದರು. ಅಪರಿಚಿತರು ನಕಲಿ ಪೇಸ್ಬುಕ್ ಖಾತೆಗಳನ್ನು ತೆರೆದು ಮಹಿಳೆಯರೊಂದಿಗೆ ಅಸಭ್ಯವಾದ ಶಬ್ಧಗಳನ್ನು ಬಳಸಿದ ಸಂದೇಶಗಳನ್ನು ಮತ್ತು ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಾ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದವು. ಪ್ರಖ್ಯಾತ ವೈದ್ಯರ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ನಕಲಿ ಫೇಸ್ಬುಕ್ ಖಾತೆಯಲ್ಲಿ ಸಂದೇಶ ಕಳುಹಿಸುತ್ತಿದ್ದರು, ನಕಲಿ ಫೇಸ್ಬುಕ್ ಖಾತೆಗಳನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಡಾ.ಪದ್ಮಿನಿ ಪ್ರಸಾದ್ ಅವರು, ಉತ್ತರ ವಿಭಾಗದ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಅಂತೆಯೇ ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಅನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನು ಕೆಲವು ನಕಲಿ ಖಾತೆಗಳನ್ನು ತೆರೆದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.