ಬೆಂಗಳೂರು: ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 12ನೇ ಕತ್ತಿನ ಹಣ ಬಿಡುಗಡೆಯಾಗಿದೆ. 2022-23ನೇ ಸಾಲಿನ ಆಗಸ್ಟ್ನಿಂದ ನವೆಂಬರ್ವರೆಗೆ ಕಂತಿನ ಸಹಾಯಧನ ರಾಜ್ಯದ 50.36 ಲಕ್ಷ ಅರ್ಹ ರೈತರಿಗೆ ಒಟ್ಟು 1007.26 ಕೋಟಿ ರೂ. ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಯೋಜನೆಯಡಿ 2018-19 ರಿಂದ 2022-23ರವರೆಗೆ ಕೇಂದ್ರ ಸರ್ಕಾರ 9968.57 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 4821.37 ಕೋಟಿ ರೂ. ಸಹಾಯಧನ ಪಾವತಿಸಿದ್ದು, 53.83 ಲಕ್ಷ ರೈತ ಕುಟುಂಬಗಳು ಪ್ರಯೋಜನ ಪಡೆದಿವೆ ಎಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ( ಒನ್ ಸ್ಟಾಪ್ ಒನ್ ಶಾಪ್ )ದಲ್ಲಿ ರೈತರಿಗೆ ರಸಗೊಬ್ಬರ, ಕೀಟನಾಶಕಗಳ ಜತೆಗೆ ಅಗತ್ಯ ಸೇವೆಗಳು ಇನ್ನು ಮುಂದೆ ಲಭಿಸಲಿವೆ. ರೈತರಿಗೆ ಒಂದೇ ಸೂರಿನಡಿ ಈ ಸೌಕರ್ಯ ಒದಗಿಸಲೆಂದು ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾಮಟ್ಟದ ಚಿಲ್ಲರೆ ರಸಗೊಬ್ಬರ ಮಾರಾಟ ಮಳಿಗೆಗಳನ್ನು ಒನ್ ಸ್ಟಾಪ್, ಒನ್ ಶಾಪ್ ಗಳನ್ನಾಗಿ ಪರಿವರ್ತಿಸಲು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವಾಲಯ ತೀರ್ಮಾನಿಸಿದೆ ಎಂದರು.
ಮೊದಲ ಹಂತದಲ್ಲಿ ದೇಶಾದ್ಯಂತ 600 ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಕಾರ್ಯಾರಂಭಿಸಿದ್ದು, ಇದರಲ್ಲಿ ಕರ್ನಾಟಕದ 43 ಕೇಂದ್ರಗಳು ಸೇರಿವೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡಗಡೆಯ ಕಾರ್ಯಕ್ರಮದಲ್ಲಿ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.



