ದಾವಣಗೆರೆ: ಹಿರಿಯರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಪಿನ್ ನಂಬರ್ ಪಡೆದು ಹಣ ವಂಚನೆ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಹರಿಹರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಅರುಣಕುಮಾರ (35) ಬಂಧಿತ ಆರೋಪಿ ಆಗಿದ್ದು, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿವಾಸಿ ಆಗಿದ್ದಾನೆ. ಆರೋಪಿಯಿಂದ 3 ಲಕ್ಷ ನಗದು, 32 ಎಟಿಎಂ ಕಾರ್ಡ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಹರಿಹರದ ಎಸ್‌ಬಿಐ ಎಟಿಎಂ ಬಳಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದ. ಹಿರಿಯ ನಾಗರಿಕರಿಂದ ಪಿನ್ ನಂಬರ್ ಪಡೆದುಕೊಂಡು, ಬೇರೊಂದು ಎಟಿಎಂ ಕಾರ್ಡ್ ನೀಡಿ ಹಣ ಡ್ರಾ ಮಾಡುತ್ತಿದ್ದ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.ಆರೋಪಿ ಅರುಣಕುಮಾರನ ವಿರುದ್ಧ ಹರಿಹರ ನಗರ ಠಾಣೆಯಲ್ಲಿ 4, ಬಸವನಗರ ಠಾಣೆಯ 1, ಬಡಾವಣೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿವೆ.
ಎಎಸ್‌ಪಿ ಕನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಸಿಪಿಐ ಸತೀಶ್‌ಕುಮಾರ್, ಪಿಎಸ್‌ಐ ಚಿದಾನಂದಪ್ಪ ಅವರ ನೇತೃತ್ವದಲ್ಲಿ ತಂಡ ಹಾಗೂ ಸಿಬ್ಬಂದಿ ಮಂಜುನಾಥ, ಮಂಜುನಾಥ ಕ್ಯಾತಮ್ಮನವರ, ಹನುಮಂತಪ್ಪ ಗೋಪನಾಳ ದಾಳಿ ನಡೆಸಿ ಆರೋಪಿ ಪತ್ತೆ ಮಾಡಿದ್ದಾರೆ. ಅಪರಿಚಿತರ ಬಳಿ ಎಟಿಎಂ ಕಾರ್ಡ್ ಹಾಗೂ ಪಾಸ್‌ವರ್ಡ್‌ಗಳನ್ನು ನೀಡಬಾರದು ಎಂದು ಎಸ್‌ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.



