ದಾವಣಗೆರೆ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಅಪಾರ ಪ್ರಮಾಣದ ಬೆಳೆ-ಮನೆಗಳಿಗೆ ಹಾನಿ ಉಂಟು ಮಾಡಿದೆ. ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಬೆಳೆಗಳು ನಾಶವಾಗಿವೆ. ಹಳೇ ಕಾಲದ ಮನೆಗಳು ಸತತ ಮಳೆಗೆ ಕುಸಿದು ಬಿದ್ದಿದ್ದು, ಜನ ಸಾಮಾನ್ಯರಿಗೆ ಸಂಕಷ್ಟ ತಂದಿದೆ.
ಜಿಲ್ಲೆಯ ಮುಖ್ಯ ಬೆಳೆ ಮೆಕ್ಕೆಜೋಳ ಶೇ.50 ರಷ್ಟು ಅತಿ ತೇವಾಂಶದಿಂದ ಹಾನಿಗೆ ಒಳಗಾಗಿದ್ದು, ಉಳಿದ 50ರಷ್ಟು ಸರಿಯಾಗಿ ಕಾಳು ಕಟ್ಟುವ ನಂಬಿಕೆ ಇಲ್ಲದಂತಾಗಿದೆ. ಇದರಿಂದ ರೈತರ ಹಾಕಿದ ಖರ್ಚು ಬರುತ್ತೆ ಅನ್ನುವುದು ಅನುಮಾನವಾಗಿದೆ. ಜಿಲ್ಲೆಯಲ್ಲಿ ಸೆ.05 ರಂದು 11.1 ಮಿ.ಮೀ. ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿಯಲ್ಲಿ ವಾಡಿಕೆ ಮಳೆ 0.8 ಮಿ.ಮೀ ಹಾಗೂ ವಾಸ್ತವ ಮಳೆ 11.9 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 3.7 ಮಿ.ಮೀ ಹಾಗೂ ವಾಸ್ತವ ಮಳೆ 4.5 ಮಿ.ಮೀ, ಹರಿಹರದಲ್ಲಿ ವಾಡಿಕೆ ಮಳೆ 2.6 ಮಿ.ಮೀ ಹಾಗೂ ವಾಸ್ತವ ಮಳೆ 24.1 ಮಿ.ಮೀ, ಹೊನ್ನಾಳಿ ವಾಡಿಕೆ ಮಳೆ 1.6 ಮಿ.ಮೀ ಹಾಗೂ ವಾಸ್ತವ ಮಳೆ 4.2 ಮಿ.ಮೀ, ಜಗಳೂರು ವಾಡಿಕೆ ಮಳೆ 3.8 ಮಿ.ಮೀ ಹಾಗೂ ವಾಸ್ತವ ಮಳೆ 13.3 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 2.2 ಮಿ.ಮೀ ಹಾಗೂ ವಾಸ್ತವ ಮಳೆ 11.9 ಮಿ.ಮೀ ಮಳೆಯಾಗಿದೆ .
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 03 ಮನೆ ತೀವ್ರ ಹಾನಿಯಾಗಿದ್ದು, 09 ದನದ ಕೊಟ್ಟಿಗೆ ಹಾನಿಯಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 03 ಮನೆ ತೀವ್ರ ಹಾನಿಯಾಗಿದ್ದು, 03 ಕಚ್ಚಾಮನೆ ಭಾಗಶ: ಹಾನಿಯಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 15 ಪಕ್ಕಾ ಮನೆ ತೀವ್ರ ಹಾನಿಯಾಗಿದ್ದು ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 07 ಪಕ್ಕಾ ಮನೆ ತೀವ್ರ ಹಾನಿಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.