ದಾವಣಗೆರೆ: ಲಾರಿ ಮತ್ತು ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಬೈಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ- ಶಿವಮೊಗ್ಗ ರಸ್ತೆಯ ಅಬ್ಬಲಗೆರೆ ಬಳಿ ನಡೆದಿದೆ.
ಮಳೆಯಿಂದ ಬೈಕ್ ನಿಯಂತ್ರಣ ತಪ್ಪಿ ಲಾರಿ ಹಿಂಬದಿಗೆ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ. ನ್ಯಾಮತಿ ಪಟ್ಟಣದ ರಾಮ್ಕುಮಾರ್(22) ಮತ್ತು ಕೆಂಚಿಕೊಪ್ಪದ ಮಲ್ಲಿಕಾರ್ಜುನ(30) ಮೃತರಾಗಿದ್ದಾರೆ. ಇವರಿಬ್ಬರು ಅಬ್ಬಲಗೆರೆ ಸಮೀಪದ ಐಪಿಎಲ್ ಕಾರ್ಖಾನೆಗೆ ಕೆಲಸಕ್ಕೆ ಬೈಕ್ನಲ್ಲಿ ತೆರಳುತ್ತಿದ್ದವರು. ಈ ವೇಳೆ ಮಳೆ ಸುರಿಯುತ್ತಿದ್ದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್, ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.