ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದಲ್ಲಿ ಮುಂಗಾರು ಮಳೆ ಮುಂದುವರೆದಿದೆ. ಇಂದು 43 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದ್ದು, ಇಂದಿನ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ ಮಾತ್ರ ಬಾಕಿ ಇದ್ದು, ಡ್ಯಾಂ ಮುಂಜಾಗ್ರತಾ ದೃಷ್ಠಿಯಿಂದ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು.
ಇಂದು (ಜು.14) 43,051 ಕ್ಯೂಸೆಕ್ ಒಳಹರಿವಿದ್ದು, ಇಂದು ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 183.2 ಅಡಿಗೆ ತಲುಪಿದೆ. ಭದ್ರಾ ಡ್ಯಾಂ 186 ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಟ್ಟು 71 ಟಿಎಂಸಿ ಸಾಮರ್ಥ್ಯ ಹೊಂದಿದೆ. ಒಳ ಹರಿವು ಹೆಚ್ಚಳ ಹಿನ್ನೆಲೆ ಅರ್ಧ ಅಡಿಯಷ್ಟು ಗೇಟ್ ಮೇಲಕ್ಕೆ ಎತ್ತಲಾಗಿದ್ದು, ನಾಲ್ಕು ಗೇಟ್ ಗಳಿಂದ 12 ಸಾವಿರ ಕ್ಯೂಸರ್ ನೀರನ್ನು ಭದ್ರಾ ನದಿಗೆ ಬಿಡಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ , ಭದ್ರಾ ಜಲಾಶಯ ಇಷ್ಟು ಬೇಗ ಭರ್ತಿಯಾಗಿರುವುದು ಖುಷಿಯ ವಿಚಾರ. ಇದೇ ಮೊದಲ ಸಲ ಇಷ್ಟು ಬೇಗ ನದಿಗೆ ನೀರು ಬಿಡಲಾಗಿದೆ. ಒಳ ಹರಿವು ಹೆಚ್ಚಳ ಆದಂತೆ ಹೊರ ಹರಿವು ಸಹ ಹೆಚ್ಚಿಸಲಾಗುವುದು ಎಂದರು. ಇದಕ್ಕೂ ಮೊದಲು ಪವಿತ್ರಾ ರಾಮಯ್ಯ ಜಲಾಶಯಕ್ಕೆ ಪೂಜೆ ಸಲ್ಲಿಸಿ ಗೇಟ್ ಓಪನ್ ಮಾಡಲಾಯಿತು. ನದಿಗೆ ನೀರು ಬಿಡುವ ವಿಚಾರ ತಿಳಿಯುತ್ತಿದ್ದಂತೆ ಜಮಾಯಿಸಿದ ಜನ ಶಿಳ್ಳೆ, ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು.



