ದಾವಣಗೆರೆ; ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ನಕಲಿ ಬಂಗಾರ ಬಿಲ್ಲೆ ನೀಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಿದ್ದು, 4.10 ಲಕ್ಷ ಮೌಲ್ಯದ ಬಂಗಾರ, ನಗದು ವಶ, ಮೊಬೈಲ್, ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಲೇ ಮನೆ ಪಾಯ ತೆಗೆಯುವಾಗ ಬಂಗಾರದ ಬಿಲ್ಲೆ ಸಿಕ್ಕಿವೆ ಎಂದು ಬೆಂಗಳೂರು ಮೂಲದ ಪ್ರಹ್ಲಾದ್ ಎನ್ನುವರಿಗೆ ಆರೋಪಿಗಳು ನಂಬಿಸಿದ್ದಾರೆ. ಇದನ್ನು ನಂಬಿದ ಪ್ರಹ್ಲಾದ್ ಎಂಬುವರು ಸಂತೇಬೆನ್ನೂರು ಪುಷ್ಕರಣಿ ಹಿಂಭಾಗದ ಮಾವಿನ ತೋಪಿಗೆ ಕರೆಸಿ, ನಕಲಿ ಬಂಗಾರದ ಬಿಲ್ಲೆ ನೀಡಿ 7.50 ಲಕ್ಷ ನಗದು, ಒಂದು ಬಂಗಾರದ ಸರ, ಎರಡು ಉಂಗುರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಬೇಧಿಸಲು ಡಿವೈಎಸ್ ಪಿ ಸಂತೋಷ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಮಹೇಶ್ ಇ.ಎಸ್ ಹಾಗೂ ಪಿಎಸ್ ಐ ಶಿವರುದ್ರಪ್ಪ ಎಸ್. ಮೇಟಿ ಅವರನ್ನೊಳಗೊಂಡ ಸಿಬ್ಬಂದಿ ಆರೋಪಿಗಳಾದ ಸುರೇಶ್ ಹಾಗೂ ಮಂಜಪ್ಪ ಎನ್ನುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3 ಲಕ್ಷ ನಗದು, 15 ಗ್ರಾಂ ಬಂಗಾರ, ಒಂದು ಮೊಬೈಲ್ ಹಾಗೂ ಬೈಕ್ ಸೇರಿ 4.10 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.