ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಸವಂತಪ್ಪ ದೊಡ್ಡಮಲ್ಲಪ್ಪ ಕುಂಬಾರ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕುಲಪತಿ ಆಗಿದ್ದ ಪ್ರೊ. ಶರಣಪ್ಪ ಹಲಸೆ ಅವರು ಇದೇ ವರ್ಷ ಮಾರ್ಚ್ನಲ್ಲಿ ನಿವೃತ್ತರಾಗಿದ್ದರು. ಪ್ರೊ. ಲಕ್ಷ್ಮಣ ಪಿ. ಅವರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಲಾಗಿತ್ತು. ಈಗ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದ ಪ್ರೊ. ಬಸವಂತಪ್ಪ ದೊಡ್ಡಮಲ್ಲಪ್ಪ ಕುಂಬಾರ ನೂತನ ಕುಲಪತಿಯಾಗಿ ನೇಮಕವಾಗಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಬಿಎ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಶಿವಶಂಕರ ಅವರನ್ನು ನೇಮಕವಾಗಿದ್ದಾರೆ. ಕುಲಸಚಿವರಾಗಿದ್ದ ಡಾ. ಎಚ್.ಎಸ್. ಅನಿತಾ ಅವರು ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗಕ್ಕೆ ವಾಪಸ್ ಆಗಲಿದ್ದಾರೆ.



