ದಾವಣಗೆರೆ: ಪಠ್ಯದಲ್ಲಿ ಬಸವಣ್ಣನಿಗೆ ಯಾವುದೇ ಅವಮಾನ ಮಾಡಿಲ್ಲ. ಬರಗೂರು ಸಮಿತಿ ಪಠ್ಯದಲ್ಲಿರುವುದೇ ಈಗಲೂ ಇದೆ. ಜನಿವಾರ ಕಿತ್ತು ಹಾಕಿ ಹೋದರು ಎಂದು ಅಲ್ಲಿತ್ತು. ಉಪನಯನ ಆಗಿ ಹೋದರು ಎಂಬುದು ಇಲ್ಲಿದೆ. ಇದರಲ್ಲಿ ಯಾವುದೇ ಅವಮಾನ ಆಗಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯ ಜೆಎನ್‌ಯು ವಿವಿಯಲ್ಲಿ ಇರುವುದು ತುಕುಡೆ ಗ್ಯಾಂಗ್, ಇದು ಪಾಕಿಸ್ತಾನದ ಧ್ವಜ ಹಾರಿಸುವ ಗ್ಯಾಂಗ್. ಈ ಗ್ಯಾಂಗ್ ಬರಗೂರು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಹಿಂದೆ ಇದೆ.ಜೆಎನ್‌ಯು ಪ್ರೊಫೆಸರ್ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ.
ಈ ಗ್ಯಾಂಗ್ ಹಿಂದೂ ಸಮಾಜವನ್ನು ಒಡೆಯಲು, ದೇಶ ಇಬ್ಭಾಗ ಮಾಡಲು ಕೆಲಸ ಮಾಡುತ್ತಿದೆ. ಈ ಗ್ಯಾಂಗ್ ಏನೇ ಮಾಡಿದರೂ ಯಶಸ್ವಿಯಾಗಲ್ಲ. ಬ್ರಿಟಿಷರು ಬರುವ ಮುಂಚೆಯೇ ದೇಶದಲ್ಲಿ ಜ್ಞಾನಾರ್ಜನೆ ನಡೆಯುತಿತ್ತು. ಈ ಇತಿಹಾಸವನ್ನ ತಿಳಿಸುವ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.



