ಬೆಂಗಳೂರು: ನೈರುತ್ಯ ಮುಂಗಾರು ಮಳೆ ರಾಜ್ಯದಲ್ಲಿ ಪ್ರವೇಶ ಪಡೆದು ಎರಡು ವಾರ ಕಳೆದರೂ ಚೇತರಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲಲ್ಲಿ ಮಳೆಯಾದರೂ ವ್ಯಾಪಕ ಮಳೆಯಾಗುತ್ತಿಲ್ಲ. ಇದರಿಂದ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತ ಸಮುದಾಯ ಆತಂಕಕ್ಕೆ ಉಂಟಾಗಿದೆ.
ರಾಜ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಪ್ರಮಾಣದ ಮಳೆಯಾಗುತ್ತಿದ್ದರೂ ಇಡೀ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದ ಮಳೆಯಾಗುತ್ತಿಲ್ಲ. ಬಲವಾದ ಮೇಲ್ಮೈ ಗಾಳಿ ಬೀಸುತ್ತಿದೆ. ಆಗಸದಲ್ಲಿ ಮೋಡ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿರುವ ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿ ನೋಡುತ್ತಿದ್ದಾರೆ.
ಮೇನಲ್ಲಿ ಬಿದ್ದ ಮುಂಗಾರು ಪೂರ್ವ ಮಳೆ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕೆಲವೆಡೆ ಬಿತ್ತನೆಯನ್ನು ಮಾಡಿದ್ದರು. ಪ್ರಾರಂಭವಾಗಿ ಎರಡು ವಾರ ಕಳೆದರೂ ಮುಂಗಾರು ಮಳೆ ಅಬ್ಬರಿಸುತ್ತಿಲ್ಲ. ಇದು ರೈತರನ್ನು ಚಿಂತೆಗೀಡು ಮಾಡಿದೆ.
ಅತಿಹೆಚ್ಚು ಮಳೆಯಾಗುತ್ತಿದ್ದ ಕರಾವಳಿ ಹಾಗೂ ಮಳೆನಾಡು ಭಾಗದಲ್ಲೇ ಮಳೆ ಕೊರತೆ ಎದುರಿಸುವಂತಾಗಿದೆ. ಆರಂಭದಿಂದಲೂ ಮುಂಗಾರು ದುರ್ಬಲವಾಗಿದ್ದು, ಆರ್ಭಟಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ.



