ನವದೆಹಲಿ: ಮುಂಗಾರು ಮಳೆ ಈಗಾಗಲೇ ದಕ್ಷಿಣ ರಾಜ್ಯಗಳಲ್ಲಿ ಪ್ರವೇಶ ಪಡೆದಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ಮತ್ತಷ್ಟು ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾತಾವರಣದಲ್ಲಿ ಬಲವಾದ ಗಾಳಿ ಮತ್ತು ಮೋಡಗಳ ರಚನೆ ದಟ್ಟವಾಗುತ್ತಿದೆ. ಇದು ಮುಂಗಾರು ಮಳೆ ಪ್ರಬಲವಾಗುವ ಲಕ್ಷಣಗಳಿವೆ ಎಂದು ತಿಳಿಸಿದೆ. ಮೇ 31ರಂದು ಆರಂಭವಾದ ಮುಂಗಾರು ಜೂನ್ 7ರ ನಡುವೆ ದಕ್ಷಿಣ ಮತ್ತು ಮಧ್ಯ ಅರಬ್ಬಿ ಸಮುದ್ರ, ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲ ಭಾಗದಲ್ಲಿ ಮಳೆಯಾಗಿದೆ. ಇದೀಗ ಈಶಾನ್ಯ ಭಾರತ ಆವರಿಸಿ, ಉತ್ತಮ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರ ತಲುಪುವ ಸಾಧ್ಯತೆಯಿದ್ದು, ನಂತರದ ಎರಡು ದಿನಗಳಲ್ಲಿ ಮುಂಬೈ ಮಹಾನಗರವನ್ನೂ ಆವರಿಸುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.