ಹೈದರಾಬಾದ್: ಇತ್ತೀಚೆಗೆ ಪಶುವೈದ್ಯೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವುದು ಸರಿಯಲ್ಲ ಎನ್ನುವ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಿದೊಂದು ಬೇಜವಾಬ್ದಾರಿ ಹೇಳಿಕೆ. ಇದು ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಯಾಗಿದ್ದು, ಪವನ್ ಕಲ್ಯಾಣ್ ಕೂಡಲೇ ಕ್ಷಮೆಯಾಚಿಸಬೇಕು ಕೂಗು ಕೇಳಿಬಂದಿದೆ.
ಜನಸೇನೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತಾಡುವ ವೇಳೆ ಪವನ್ ಕಲ್ಯಾಣ್, ಸಹೋದರಿ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಇಡೀ ದೇಶವೇ ಒತ್ತಾಯಿಸುತ್ತಿದೆ. ಸಂವಿಧಾನ ಯಾರಿಗೂ ಯಾರನ್ನು ಕೊಲ್ಲುವ ಹಕ್ಕು ನೀಡಿಲ್ಲ. ಆದ್ದರಿಂದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಬದಲಿಗೆ ಸಿಂಗಾಪುರ್ ಮಾದರಿಯಲ್ಲಿ ಶಿಕ್ಷೆ ನೀಡಬೇಕು ಎಂದಿದ್ದರು.

ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ವಿಚಾರಕ್ಕೆ ನನ್ನ ಸಹಮತವಿಲ್ಲ. ಸಿಂಗಾಪುರ್ ನಲ್ಲಿ ಅತ್ಯಾಚಾರಿಗಳಿಗೆ 20 ವರ್ಷ ಜೈಲು ಶಿಕ್ಷೆ, ದಂಡ ಹಾಗೂ ಕಬ್ಬಿನಿಂದ ಹೊಡೆಯುವ ಶಿಕ್ಷೆ ವಿಧಿಸಲಾಗುತ್ತದೆ. ಇದೇ ಮಾದರಿ ಅನುಸರಿಸಿ ಎಂದಿದ್ದಾರೆ.
ನಟ ಪವನ್ ಕಲ್ಯಾಣ್ ಹೇಳಿಕೆಗೆ ಈಗ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ವೈಎಸ್‍ಆರ್ ಕಾಂಗ್ರೆಸ್ ಸಂಸದ ವಿಜಯ್ ಸಾಯ್ ರೆಡ್ಡಿ, ಪವನ್ ಕಲ್ಯಾಣ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇಡೀ ದೇಶವೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸುತ್ತಿದೆ ಎಂದು ಕಿಡಿಕಾರಿದ್ದಾರೆ.



