ಬೆಂಗಳೂರು: ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ, ಇದೀಗ ದುರ್ಬಲಗೊಂಡಿದೆ. ಕರಾವಳಿ ಸಹಿತ ರಾಜ್ಯದ ಹಲವೆಡೆ ಅಲ್ಪ ಮಳೆಯಾಗುತ್ತಿದೆ. ಈ ಬೆಳವಣಿಗೆ ಮುಂಗಾರು ಮತ್ತೆ ಚುರುಕುಗೊಂಡಂತೆ ಗೋಚರಿಸಿದರೂ, ಈಗಿನ ಲೆಕ್ಕಾಚಾರದಂತೆ ಮುಂದಿನ ಒಂದೆರಡು ದಿನ ದುರ್ಬಲವಾಗುವ ಸಾಧ್ಯತೆ ಇದೆ.
ಜೂ.6ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಬಿಜಾಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ಕಾಸರಗೋಡು ಸಹಿತ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಸಂಜೆ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಸಂಜೆ ವೇಳೆ ಅಲ್ಲಲ್ಲಿ ಮೋಡ ಅಥವಾ ತುಂತುರು ಮಳೆಯಾಗಲಿದೆ.



