ದಾವಣಗೆರೆ: ಹದಿನೈದು ವರ್ಷಗಳಿಂದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೇ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ ಸಿಎಚ್ ಪೋರ್ಟಲ್ ಡಾಟಾ ಎಂಟ್ರಿ ಸಮಸ್ಯೆ ಇದೆ. ಇದನ್ನು ಕೂಡಲೇ ಬಗೆಹರಿಸಬೇಕು. ಈ ಸಮಸ್ಯೆಯಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ತುಂಬಿಕೊಟ್ಟು ಸೂಕ್ತ ವೇತನ ನೀಡಬೇಕು. ಆರೋಗ್ಯ ಇಲಾಖೆಯಲ್ಲಿ ಬರುವ ಮೂವತ್ತಾರು ಮೂಲ ಚಟುವಟಿಕೆಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಹೇರಲ್ಪಟ್ಟಿರುವ ಇತರೆ ಕೆಲಸಗಳನ್ನು ಕೈಬಿಡಬೇಕು. ಅಲ್ಲದೆ ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಮಾಸಿಕ ಗೌರವ ಧನವನ್ನು ಸರ್ಕಾರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬರುವ ಕಾಯಿಲೆ ಹೊರತುಪಡಿಸಿ ಕಾರ್ಯಕರ್ತೆಯರ ಗಂಭೀರ ಕಾಯಿಲೆಗಳನ್ನು ಪಟ್ಟಿಮಾಡಿ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ಪರಿಹಾರ ಮೊತ್ತವನ್ನು ನೀಡಬೇಕು. ಕೆಲಸದ ಸ್ಥಳದಿಂದ ಇಲಾಖೆ ಕೆಲಸಗಳಿಗಾಗಿ ಇತರ ಸ್ಥಳಗಳಿಗೆ ಹೋಗುವ ಕಾರ್ಯಕರ್ತರಿಗೆ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆಯನ್ನು ನಿಗದಿಗೊಳಿಸಿ ಆದೇಶ ಹೊರಡಿಸಬೇಕೆಂದರು. ದಿನನಿತ್ಯದ ಚಟುವಟಿಕೆಗಳನ್ನು ನಮೂದಿಸಲು ಆಶಾ ಡೈರಿ ಇಡಬೇಕು. ಸಮಯಕ್ಕೆ ಸರಿಯಾಗಿ ಪ್ರತಿ ವರ್ಷ ನೀಡಬೇಕಾದ ಸಮವಸ್ತ್ರದ ಜತೆಗೆ ಉತ್ತಮ ಗುಣಮಟ್ಟದ ಸಮವಸ್ತ್ರ ನೀಡಬೇಕು ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ನಾಗವೇಣಿ ತಿಪ್ಪೆಸ್ವಾಮಿ, ಅಣಬೇರು ಉಮಾ, ನಲ್ಲೂರು ಲೀಲಾವತಿ, ಬಿದರಕೆರೆ ಅನಿತಾ, ಸಾಸ್ವೆಹಳ್ಳಿ ಕಮಲಮ್ಮ, ಗೀತಾ ಇತರರಿದ್ದರು.



