ಡಿವಿಜಿ ಸುದ್ದಿ, ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯಲ್ಲಿಯೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕಸಪಾ ಜಿಲ್ಲಾಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆ ಜಿಲ್ಲೆಯಿಂದ ಬೇರೆಡೆ ಸ್ಥಳಾಂತರವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟತೆ ಇಲ್ಲ. ಈಗಾಗಲೇ ದಾವಣಗೆರೆಯಲ್ಲಿಯೇ ಸಮ್ಮೇಳನ ನಡೆಸಲು 1,200 ಪುಟಗಳ ಕ್ರಿಯಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 15 ಸಮಿತಿಗಳನ್ನು ರಚಿಸಲಾಗಿದ್ದು, ಹಿಂದಿನ ಸರ್ಕಾರದಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ರಾಜ್ಯದಲ್ಲಿ ಬರಗಾಲವಿದ್ದ ಕಾರಣ ದಿನಾಂಕ ನಿಗದಿಪಡಿಸಿಲ್ಲ. ಇತ್ತೀಚೆಗೆ ಮುಖ್ಯಮಂತ್ರಿ ದಾವಣಗೆರೆಗೆ ಬಂದ ಸಂದರ್ಭದಲ್ಲಿ ದಾವಣಗೆರೆಯಲ್ಲಿಯೇ ಸಮ್ಮೇಳ ನಡೆಸುವಂತೆ ಮನವಿ ಮಾಡಿಕೊಂಡಿದ್ದೇವೆ. ಅವರು ಸಹ ದಾವಣಗೆರೆಯಲ್ಲಿಯೇ ಆಯೋಜಿಸುವ ಭರವಸೆ ನೀಡಿದ್ದಾರೆ ಎಂದರು.
ಡಿ.7 ರಂದು ಮಹಲಿಂಗರಂಗ ಪ್ರಶಸ್ತಿ ಪ್ರದಾನ ಸಮಾರಂಭ
ಜಿಲ್ಲಾ ಸಾಹಿತ್ಯ ಪರಿಷತ್ತು, ಶ್ರೀಮತಿ ಗೌರಮ್ಮ ಮೋತಿ ಪಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಡಿ.7 ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಸಂಜೆ 4 ಗಂಟೆಗೆ ಮಹಲಿಂಗರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೋತಿ ಆರ್ . ಪರಮೇಶ್ವರ ರಾವ್ , ಎ.ಆರ್ . ಉಜ್ಜನಪ್ಪ, ಶಿಕ್ಷಣ ತಜ್ಞ ವಾಮದೇವಪ್ಪ ಭಾಗಿಯಾಗಲಿದ್ದಾರೆ ಎಂದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಅವರಿಗೆ ಮಹಲಿಂಗ ಪ್ರಶಸ್ತಿ ಪ್ರದಾನ ಮಾಡಲಿದ್ದು, 2019 ನೇ ಸಾಲಿನಲ್ಲಿ ಕನ್ನಡ ರಾಜೋತ್ಸವ ಪ್ರಶಸ್ತಿ ಪಡೆದ ವಿಜಯಕುಮಾರ್ ಕೊಡಗನೂರು, ಎಸ್.ಟಿ.ಶಾಂತಗಂಗಾಧರ್, ಡಾ. ಬಿ.ರಾಜಶೇಖರಪ್ಪ, ಸಾಲು ಮರದ ವೀರಾಚಾರಿ, ಕತ್ತಿಗೆ ಚನ್ನಬಸಪ್ಪ, ಎನ್.ಎಸ್. ರಾಜು ಅವರಿಗೆ ಸನ್ಮಾನಿಸಲಾಗುವುದು



