ಶಿವಮೊಗ್ಗ: ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲು ತೀರ್ಮಾನಿಸಲಾಗಿದೆ. ನೀರಿನ ಅವಶ್ಯಕತೆಗೆ ಅನುಗುಣವಾಗಿ ಮೇ 20ರ ವರೆಗೆ ಹೆಚ್ಚುವರಿಯಾಗಿ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ರಮಾನ ಕೈಗೊಳ್ಳಲಾಯಿತು. ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು (ಏ.28) ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆ ಬಳಿಕ ಮಾತನಾಡಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸಲಹಾ ಸಮಿತಿ ಮತ್ತು ರೈತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭದ್ರಾ ಜಲಾಶಯದ ಬೇಸಿಗೆ ಬೆಳೆಗಳಿಗೆ ಹರಿಸುತ್ತಿದ್ದ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುತ್ತಿದೆ. ನೀರಿನ ಅವಶ್ಯಕತೆಗನುಗುಣವಾಗಿ ಮೇ 20 ರವರೆಗೆ ನೀರನ್ನು ಹರಿಸಲು ಸಮಿತಿ ನಿರ್ಧಾರ ಕೈಗೊಂಡಿದೆ ಎಂದರು.
ನಾನು ಪ್ರಾಧಿಕಾರದ ಅಧ್ಯಕ್ಷೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದೇನೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸಿದ್ದೇನೆ. ನಾವು ಕೇವಲ ಅಧಿಕಾರಿಗಳ ಮೇಲೆ ಅವಲಂಬಿತರಾಗದೇ ಕೆಲಸ ಮಾಡಬೇಕು. ಹಿಂದೆ ಬರ ಇಲ್ಲದಿದ್ದ ಸಮಯದಲ್ಲೂ ಸಹ ಕಡೆಯ ಭಾಗಕ್ಕೆ ನೀರು ಸಿಕ್ಕಿರಲಿಲ್ಲ. ಆದರೆ ಕಾಳಜಿ ಮತ್ತು ಜವಾಬ್ದಾರಿ ವಹಿಸಿದಲ್ಲಿ ಎಲ್ಲರಿಗೆ ನ್ಯಾಯ ಒದಗಿಸಬಹುದು. ಕಳೆದ ಬಾರಿ ಹಾಗೂ ಈ ಬಾರಿ ಎರಡೂ ಸಲ ಜಲಾಶಯದಲ್ಲಿ ನೀರು ಉಳಿಕೆ ಮಾಡಿದ್ದೇವೆ. ಅನಾವಶ್ಯಕವಾಗಿ ಹರಿಯುತ್ತಿದ್ದ ನೀರನ್ನು ವಾಣಿವಿಲಾಸ ಜಲಾಶಯಕ್ಕೆ ಹರಿಸಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯ ಡಿಪಿಆರ್ ನಲ್ಲಿ ಬದಲಾವಣೆ ಆಗಬೇಕು. ಶಾಸಕರು ಸಹ ಈ ಬಗ್ಗೆ ಇಚ್ಚಾಶಕ್ತಿ ತೋರಬೇಕೆಂದರು ಎಂದರು.
ರೈತ ಮುಖಂಡರಾದ ಎಚ್.ಆರ್.ಬಸವರಾಜಪ್ಪ ಮಾತನಾಡಿ, 29.9 ಟಿಎಂಸಿ ನೀರು ಹರಿಸುವ ಭದ್ರಾ ಮೇಲ್ದಂತೆ ಯೋಜನೆಗೆ ತುಂಗಾದಿಂದ 17.4 ಟಿಂಎಂಸಿ ಮತ್ತು ಭದ್ರಾ ಜಲಾಶಯದಿಂದ 12.5 ಟಿಎಂಸಿ ನೀರು ಬಿಡಬೇಕೆಂದು ಡಿಪಿಆರ್ ಆಗಿದೆ. ಆದರೆ ಭದ್ರಾದ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರು ತುಂಗಾದಿಂದಲೇ ಹರಿಸುವಂತೆ ಆಗಬೇಕೆಂದು ಮನವಿ ಮಾಡಿದರು.
ಸದ್ಯ ಬಳಕೆಗೆ ಬರುವ ನೀರಿನ ಪ್ರಮಾಣ 25.894 ಟಿಎಂಸಿ . ಈ ಬಾರಿಯ ಬೇಸಿಗೆ ಬೆಳೆಗಳಿಗೆ ಹೆಚ್ಚುವರಿ ದಿನಗಳಿಗೆ ಹರಿಸಲು ಬೇಕಾಗಬಹುದಾದ ಸರಾಸರಿ ನೀರಿನ ಪ್ರಮಾಣ 6.20 ಟಿಂಎಂಸಿ. ಒಟ್ಟು ಬಳಕೆಯಾಗುವ ನೀರಿನ ಪ್ರಮಾಣ 17.24 ಟಿಂಎಂಸಿ. ಭದ್ರಾ ಜಲಾಶಯದಲ್ಲಿ ಉಳಿಯಬಹುದಾದ ನೀರಿನ ಪ್ರಮಾಣ 8.65 ಟಿಎಂಸಿ.
ಸಮಿತಿ ಸದಸ್ಯರಾದ ಷಡಕ್ಷರಪ್ಪ ಗೌಡ್ರ, ತೇಜಸ್ವಿ ಪಟೇಲ್, ವೈ.ಸಿ.ಮಲ್ಲಿಕಾರ್ಜುನ, ರುದ್ರಮೂರ್ತಿ, ಮಂಜುನಾಥ್ ರೆಡ್ಡಿ, ಮಹೇಶ್ ಇತರೆ ಸದಸ್ಯರು ಹಾಗೂ ರೈತ ಸಂಘಟನೆ ಪದಾಧಿಕಾರಿಗಳು, ರೈತ ಮುಖಂಡರು ಮಾತನಾಡಿದರು.ಸಭೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



