ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಮೇ 01 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡಡಯಲಿದೆ. ಹಾಗೂ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಪರಿಷತ್ತಿನ ಸರ್ವ ಸದಸ್ಯರ ವಿಶೇಷ ಸಭೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಶ್ರೀ ಕನಕ ಕಲಾ ಭವನದಲ್ಲಿ ನಡೆಯಲಿದೆ. ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಪರಿಷತ್ತಿನ ಧ್ಯೇಯೋದ್ದೇಶಗಳ ಉದ್ದೇಶಿತ ತಿದ್ದುಪಡಿ, ಪರಿಷತ್ತಿನ ನಿಯಮ-ನಿಬಂಧನೆಗಳ ಉದ್ದೇಶಿತ ತಿದ್ದುಪಡಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ, ಅನುಮೋದನೆ ಹಾಗೂ ತೀರ್ಮಾನವನ್ನು ಮಾಡಬೇಕಾಗಿರುವುದರಿಂದ ದಾವಣಗೆರೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ.ಸಾ.ಪ. ಆಜೀವ ಸದಸ್ಯರು ಭಾಗವಹಿಸಬೇಕು ಹಾಗೂ ಸಭೆಯಲ್ಲಿ ಭಾಗವಹಿಸುವ ಆಜೀವ ಸದಸ್ಯರು ಕಡ್ಡಾಯವಾಗಿ ಪರಿಷತ್ತಿನ ಗುರುತಿನ ಚೀಟಿ ಅಥವಾ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಸೂಚಿಸಿರುವ ಯಾವುದಾದರೊಂದು ಗುರುತಿನ ಚೀಟಿಯನ್ನು ತರುವಂತೆ ಬಿ.ವಾಮದೇವಪ್ಪ ಅವರು ಮನವಿ ಮಾಡಿದ್ದಾರೆ.



