ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೀತಿಸಿದ ಯುವಕನಿಂದಲೇ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟಿ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿದ್ದಾನೆ. ಆರೋಪಿಯನ್ನು ನಾಗೇಶ್ ಎಂದು ಗುರುತಿಸಲಾಗಿದೆ.
ನಾಗೇಶ್ ಯುವತಿಯನ್ನು ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಎಲ್ಲಿ ಹೋದರೂ ಹಿಂದೆ ಹಿಂದೆಯೇ ಸುತ್ತುತ್ತಿದ್ದ. ಹುಡುಗಿ ತನಗೆ ಇಷ್ಟವಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಕೇಳಲು ನಾಗೇಶ್ ಕೇಳುತ್ತಿರಲಿಲ್ಲ. ಕಡೆಯ ಬಾರಿಗೆ ಪ್ರೀತಿಸುತ್ತೀಯಾ ಇಲ್ಲವಾ ಎಂದು ಆವಾಜ್ ಹಾಕಿದ್ದಾನೆ, ಹುಡುಗಿ ನಿರಾಕರಿಸಿದಾಗ ಆ್ಯಸಿಡ್ ಎರಚಿದ್ದಾನೆ. ಯುವತಿ ಇಂದು ಬೆಳಗ್ಗೆ ಕಚೇರಿಗೆ ತೆರಳುವಾಗ ಆ್ಯಸಿಡ್ ದಾಳಿ ನಡೆದಿದೆ.
ಯುವತಿಯನ್ನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ನಾಗೇಶ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಒಂದೆರಡು ದಿನದ ಪ್ರೇಮ ನಿವೇದನೆಯಲ್ಲ, ಬರೋಬ್ಬರಿ ಏಳು ವರ್ಷಗಳಿಂದ ಪ್ರೀತಿಸುವಂತೆ, ಮದುವೆಯಾಗುವಂತೆ ನಾಗೇಶ್ ಪೀಡಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಮತ್ತೆ ಮದುವೆಯಾಗುವಂತೆ ಆತ ಕೇಳಿದಾಗ, ಇಬ್ಬರ ನಡುವೆ ಜಗಳವಾಗಿದೆ. ಹುಡುಗಿ ಸಾಧ್ಯವೇ ಇಲ್ಲವೆಂದು ಹೇಳಿದ್ದಾಳೆ. ಇದಾದ ನಂತರ ಇಂದು ಮುಂಜಾನೆ ನಾಗೇಶ್ ಆಸಿಡ್ ದಾಳಿ ಮಾಡಿದ್ದಾನೆ.
ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್, ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂಟುವರೇ ಸುಮಾರಿಗೆ ಯುವತಿ ತಂದೆ ಬೈಕ್ ನಲ್ಲಿ ಕರೆದುಕೊಂಡು ಬಂದು ಡ್ರಾಪ್ ಮಾಡಿ ಹೋಗಿದ್ದರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಯುವತಿ ಮೇಲೆ ಆರೋಪಿ ನಾಗೇಶ್ ಆ್ಯಸಿಡ್ ಎರಚಿದ್ದಾನೆ. ಸದ್ಯ ಯುವತಿಯ ಪರಿಸ್ಥಿತಿ ಗಂಭೀರವಾಗಿದೆ. ತ್ರೀವ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದಿದ್ದಾರೆ.



