ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಳೆ (ಏ.23) ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದಾರೆ.
ನಾಳೆ ಬೆಳಗ್ಗೆ 10ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ (ಹೆಲಿಕಾಪ್ಟರ್ ಮೂಲಕ) ದಿಂದ ಹೊರಟು 10.45ಕ್ಕೆ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್‍ಗೆ ಅಗಮಿಸುವರು. ಬೆ.11.15ಕ್ಕೆ ಜಿಎಂಐಟಿ ಹೆಲಿಪ್ಯಾಡ್‍ನಿಂದ (ರಸ್ತೆಯ ಮೂಲಕ) ಹೊರಟು ಬೆ.11.30ಕ್ಕೆ ಶ್ರೀ ಪಂಚಮಶಾಲಿ ಜಗದ್ಗುರು ಪೀಠ ಹರಕ್ಷೇತ್ರ ಹರಿಹರ ವತಿಯಿಂದ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಮತ್ತು ರಾಷ್ಟ್ರೀಯ ಶಿಕ್ಷಣ – ಕೌಶಲ್ಯ ಮತ್ತು ಕೃಷಿ ಸಮಾವೇಶ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು.
ಮ.01.30ಕ್ಕೆ ಶ್ರೀ ಪಂಚಮಶಾಲಿ ಗುರುಪೀಠದಿಂದ ಹೊರಟು ಜಿಎಂಐಟಿ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂಚಮಸಾಲಿ ಮಠದಲ್ಲಿ ಹರ ಜಾತ್ರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗೆ ಈ ಬಾರಿ ಏಪ್ರಿಲ್ 23ರಂದು ಪಂಚಮಸಾಲಿ ಸಮಾಜದ ವೀರ ಸೇನಾನಿಗಳಿಗೆ ಗೌರವ ಮತ್ತು ಏಪ್ರಿಲ್ 24ರಂದು ಬೃಹತ್ ಉದ್ಯೋಗ ಮೇಳವನ್ನು ಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗವಹಿಸುವರು’ ಎಂದು ಹೇಳಿದರು. ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿಯ ಚನ್ನಮ್ಮ, ಕಂಬಳಿ ಸಿದ್ದಪ್ಪ, ಶಂಕರಗೌಡ್ರು ಸೇರಿ ಆಯ್ದ 7 ಜನ ವೀರ ಸೇನಾನಿಗಳ ಜೀವನಚರಿತ್ರೆ ಪುಸ್ತಕ, ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಇವರ ಸಾಧನೆ ಆಧರಿಸಿ ಖ್ಯಾತ ಗೀತೆ ರಚನಕಾರ ಕೆ.ಕಲ್ಯಾಣ್ ಅವರು ರಚಿಸಿದ ಗೀತೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಮಧ್ಯಾಹ್ನ 3ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ, ಕೃಷಿ, ಕೌಶಲ ತರಬೇತಿ ಕುರಿತು ಗೋಷ್ಠಿ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ವಿಷಯ ಮಂಡನೆ ಮಾಡುವರು. ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಕುಲಸಚಿವರು’ ಪಾಲ್ಗೊಳ್ಳುವರು. ಸಂಜೆ 5ರಿಂದ 7ರವರೆಗೆ ದೇಶದ ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಲಾತಂಡಗಳಿಂದ ವಿಶೇಷ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 24ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಪಂಚಮಸಾಲಿ ಜಗದ್ಗುರು ಪೀಠ, ನಿರಾಣಿ ಫೌಂಡೇಶನ್, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರಿನ ಎಥ್ನೋಟೆಕ್ ಅಕಾಡೆಮಿಗಳ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ನಡೆಯಲಿದೆ. ಟಾಟಾ ಮೋಟರ್ಸ್, ವಿಪ್ರೊ, ಇನ್ಫೊಸಿಸ್, ಜೆಎಸ್‌ಡಬ್ಲೂ ಸೇರಿದಂತೆ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ.ಎಸ್ಸೆಸ್ಸೆಲ್ಸಿ ನಂತರದ ಉದ್ಯೋಗಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಲು ಅರ್ಹರಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಬೆಳಿಗ್ಗೆ 11ಕ್ಕೆ ಉದ್ಯಮಿಯಾಗು ಉದ್ಯೋಗ ನೀಡು ಎನ್ನುವ ಶೀರ್ಷಿಕೆಯಡಿ ಗೋಷ್ಠಿಯಲ್ಲಿ ನೂರಾರು ಯುವ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ 3ಕ್ಕೆ 4ನೇ ವರ್ಷದ ಪೀಠಾರೋಹಣದಲ್ಲಿ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀ, ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ, ಜೈನ ಸಮುದಾಯದ ಲೋಕೇಶ್ ಮುನಿಗಳು ಹಾಗೂ ವಿವಿಧ ಮಠಾದೀಶ ಸಾನ್ನಿಧ್ಯ ವಹಿಸುವರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ.