ದಾವಣಗೆರೆ: ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಉತ್ಸಹ ಇಮ್ಮಡಿಗೊಂಡಿದ್ದು, 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ ಎಂದು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆ ಶಿಗ್ಗಾವಿ ಹಾಗೂ ದಾವಣಗೆರೆ ಉತ್ತರ ಎರಡು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ. ಸಿಎಂ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ. ನಮ್ಮ ಕ್ಷೇತ್ರದಿಂದ ಬೊಮ್ಮಾಯಿ ಸ್ಪರ್ಧಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
ದಾವಣಗೆರೆ ಉತ್ತರ ಹಾಲಿ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಸಿಎಂ ಬೊಮ್ಮಾಯಿ ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ದಾವಣಗೆರೆ ಉತ್ತರದಿಂದ ಸಿಎಂ ಸ್ಪರ್ಧೆ ವಿಚಾರ ನನಗೆ ಸಂಸದ ಸಿದ್ದೇಶ್ವರ್ ಅವರಿಂದ ಗೊತ್ತಾಗಿದೆ. ಇದು ಸಂತಸದ ವಿಚಾರ ಎಂದು ತಿಳಿಸಿದರು.



