ಹರಿಹರ: ಏ.20ರಿಂದ 24ರವರೆಗೆ ಹರಜಾತ್ರೆ ನಡೆಯಲಿದೆ. ಈ ಬಾರಿ ಉದ್ಯಮಿಯಾಗು, ಉದ್ಯೋಗ ನೀಡು ಎಂಬ ಘೋಷ ವಾಕ್ಯದೊಂದಿಗೆ ಉದ್ಯೋಗ ಮೇಳ ನಡೆಸಲಾಗುವುದು ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಅವರಣದಲ್ಲಿ ನಡೆದ ರಾಜ್ಯ ಪಂಚಮಸಾಲಿ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಸಮುದಾಯದವರಿಗೆ ನ್ಯಾಯಯುತವಾಗಿ 2ಎ ಮೀಸಲಾತಿ ದೊರಕಿಸಲು ಎಲ್ಲ ರೀತಿಯ ಹೋರಾಟ ನಡೆಸಲಾಗುವುದು. ನಾಡಿನ ದೊಡ್ಡ ಸಮಾಜ ನಮ್ಮದು. ಗುರಿ ಮುಟ್ಟಲು ಅಡ್ಡದಾರಿಯಲ್ಲಿ ಹಿಡಿಯಲ್ಲ. ಸಮಾಜದ ಸಂಘಟನೆಗಾಗಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಪದಾಧಿಕಾರಿಗಳ ನೇಮಕವಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ನೂತನ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ್ ಮಾತನಾಡಿ, ಈಗಾಗಲೇ ಸಮಾಜದ 11 ಸಾವಿರ ಸದಸ್ಯತ್ವವಾಗಿದೆ. ಮುಂದಿನ ಆರು ತಿಂಗಳಲ್ಲಿ 15 ಸಾವಿರ ಸದಸ್ಯತ್ವ ಮಾಡಿಸಬೇಕಿದೆ. ಮುಂದಿನ ದಿನಗಳಲ್ಲಿ ಹರ ವಿದ್ಯಾ ಸಂಸ್ಥೆಯ ಹೆಸರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಯೋಜನೆ ಇದೆ ಎಂದರು.
ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಈ ಹಿಂದೆ ನಮ್ಮ ಸಮಾಜದವರನ್ನು ಹಿಂಬಾಲಕರನ್ನಾಗಿ ಮಾಡಿ, ಬಳಸಿಕೊಂಡಿದ್ದರು. ಈಗ ನಮ್ಮ ಸಮಾಜ ನೋಡಿ ಹೆದರುತ್ತಿದ್ದಾರೆ ಎಂದರು.
ಪಂಚಮಸಾಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ವಸಂತ ಹುಲ್ಲತ್ತಿ , ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್, ಧರ್ಮದರ್ಶಿ ಪಿ.ಡಿ. ಶಿರೂರು, ನಿಡೋಣಿ, ಬಾವಿ ಬೆಟ್ಟಪ್ಪ, ಮುಖಂಡರಾದ ಬಸವರಾಜ್ ದಿಂಡೂರ್, ಎನ್.ಜಿ.ನಾಗನಗೌಡ್ರು, ಜ್ಯೋತಿ ಪ್ರಕಾಶ್, ಹೊನ್ನಾಳಿ ಬಾಬಣ್ಣ, ಚಂದ್ರಶೇಖರ್ ಪೂಜಾರ್, ಗುತ್ತೂರು ಕರಿಬಸಪ್ಪ, ವಿವಿಧ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.