ಡಿವಿಜಿ ಸುದ್ದಿ, ದಾವಣಗೆರೆ: ನಗರದ ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಠೇವಣಿದಾರರ 18 ರಿಂದ 20 ಕೋಟಿ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇವತ್ತು ಠೇವಣಿದಾರರ ಒಕ್ಕೂಟ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಜಿ. ಕೃಷ್ಣ ಮೂರ್ತಿ, ಕಾರ್ಯದರ್ಶಿ ವೇದಮೂರ್ತಿ ನೇತೃತ್ವದಲ್ಲಿ ನಗರದ ಕುವೆಂಪು ರಸ್ತೆಯಲ್ಲಿರುವ ಲಕ್ಷ್ಮೀ ಕ್ರೆಡಿಟ್ ಕೋ –ಆಪರೇಟಿವ್ ಸೊಸೈಟಿ ಮುಂದೆ ಜಮಾಯಿಸಿದ ನೂರಾರು ಠೇವಣಿದಾರರು, ತಮ್ಮ ಠೇವಣಿ ಹಣ ನೀಡುವಂತೆ ಬ್ಯಾಂಕ್ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

2017 ರಿಂದ ನಮ್ಮ ಹಣ ನಮಗೆ ವಾಪಸ್ಸು ನೀಡಿ ಎಂದು ಕೇಳಿಕೊಂಡರೂ ಠೇವಣಿ ಮಾಡಿದ ಹಣ ವಾಪಸ್ಸು ನೀಡುತ್ತಿಲ್ಲ. ಪ್ರತಿ ಸಲ ಮನವಿ ಮಾಡಿದಾಗಲೂ ಸುಳ್ಳು ಭರವಸೆ ನೀಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲ್ಲಾರ ಬಳಿ ಬಾಂಡ್ ಪೇಪರ್ ಇದ್ದರೂ, ನಮ್ಮ ಠೇವಣಿ ನಮಗೆ ನೀಡಲು ಸತಾಯಿಸುತ್ತಿದ್ದಾರೆ ಎಂದು ಠೇವಣಿದಾರರು ಆಕ್ರೋಶ ವ್ಯಕ್ತಪಡಿಸಿದರು.
ಹೊರಗಡೆ ಪ್ರತಿಭಟನೆ ನಡೆಯುತ್ತಿದ್ದರೂ ಆಡಳಿತ ಮಂಡಳಿ ಪ್ರತಿಭಟನಕಾರರ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಪ್ರತಿಭಟನಕಾರರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿ ಮನವಿ ನೀಡಿದರು.

ಮನವಿ ಸ್ವೀಕರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೊಸೈಟಿ ವಿರುದ್ಧ ಎಲ್ಲರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನೀವು ಸಲ್ಲಿಸುವ ದಾಖಲೆ ಆಧಾರ ಎಲ್ಲಾ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಕೇಸನ್ನು ಸಿಐಡಿಗೆ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಒಕ್ಕೂಟದ ಕಾರ್ಯದರ್ಶಿ ವೇದಮೂರ್ತಿ ಮಾಹಿತಿ ನೀಡಿದರು.
ನಗರದ ಲಕ್ಷ್ಮೀ ಕೋ –ಆಪರೇಟಿವ್ ಬ್ಯಾಂಕ್ ನಲ್ಲಿ ಸುಮಾರು 1,200 ಕ್ಕೂ ಹೆಚ್ಚು ಜನರು 18 ರಿಂದ 20 ಕೋಟಿಯಷ್ಟು ವಿವಿಧ ಬಗೆಯ ಠೇವಣಿ ಇಟ್ಟಿದ್ದಾರೆ. ಬ್ಯಾಂಕ್ ನಷ್ಟದಲ್ಲಿದೆ ಎಂಬ ಕಾರಣ ನೀಡಿ ಠೇವಣಿದಾರರ ಹಣ ವಾಪಸ್ಸು ಕೊಡಲು ಲಕ್ಷ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸತಾಯಿಸುತ್ತಿದೆ. ಸಣ್ಣ ಸಣ್ಣ ವ್ಯಾಪಾರಿಗಳು, ಬಡವರು, ಕೂಲಿ ಕಾರ್ಮಿಕರು ಕಷ್ಟಪಟ್ಟು ದುಡಿದ ಹಣ ವಾಪಸ್ಸು ನೀಡದಕ್ಕೆ ಹಿಡಿ ಶಾಪ ಹಾಕುತ್ತಿದ್ಧಾರೆ.



