ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ತೆಲಿಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಶಾಸಕ ಜಿ.ಕರುಣಾಕರರೆಡ್ಡಿ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.
ವೈದ್ಯರು ಮತ್ತು ಸಿಬ್ಬಂದಿ ಸರಿಯಗಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಹಾಜರಾತಿ ಪುಸ್ತಕ ಪರಿಶೀಲಿಸಿ ಸಹಿ ಮಾಡದ ಸಿಬ್ಬಂದಿಗಳ ಮಾಹಿತಿ ಪಡೆದುಕೊಂಡರು. ಹಾವು ಮತ್ತು ನಾಯಿ ಕಡಿತ ಚುಚ್ಚುಮದ್ದು ಏಕೆ ಇಟ್ಟಿಲ್ಲ ಎಂದು ಪ್ರಶ್ನಿಸಿದಾಗ ದಾಸ್ತಾನು ಇಲ್ಲ ಎಂದು ವೈದ್ಯರು ಉತ್ತರಿಸುತ್ತಿದ್ದಂತೆ ಕೆಂಡಮಂಡಲವಾದ ಶಾಸಕರು ರೈತರು, ಕೂಲಿಕಾರ ಹೆಚ್ಚಾಗಿದ್ದಾರೆ. ಹೀಗಾಗಿ ಸಾಬೂಬು ಹೇಳದೇ ತಕ್ಷಣವೇ ಚುಚ್ಚುಮದ್ದು ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ರಾತ್ರಿ ವೇಳೆ ವೈದ್ಯರು ಮತ್ತು ಸಿಬ್ಬಂದಿ ಇರುವುದಿಲ್ಲ ಎಂಬ ದೂರು ಕೇಳಿ ಬಂದಿದೆ. ರಾತ್ರಿ ತಕ್ಷಣ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಅಯುಷ್ಮಾನ್ ಭವ ಕಾರ್ಡ್ ಏಕೆ ವಿತರಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ ಇಂಟರ್ನೆಟ್ ಸಂಪರ್ಕ ಇಲ್ಲ ಎಂದು ಸಿಬ್ಬಂದಿ ತಿಳಿಸಿದರು. ಆಸ್ಪತ್ರೆ ಎಸಿ ಬೇಕು ಎಂದು ಬೇಡಿಕೆ ಸಲ್ಲಿಸುವ ನೀವು. ಇಂಟರ್ನೆಟ್ ಬೇಕೆಂದು ಏಕೆ ಕೇಳಲಿಲ್ಲ ಎಂದು ವೈದ್ಯರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ತಾಯಿ ಕಾರ್ಡ್ ವಿತರಿಸಲು ಮತ್ತು ಗ್ಲುಕೋಸ್ ಹಾಕಲು ರೋಗಿಗಳು ಮತ್ತು ಸಾರ್ವಜನಿಕರಿಂದ ಹಣ ಕೇಳುತ್ತಿರುವುದಾಗಿ ಜನರು ನೇರವಾಗಿ ನಮಗೆ ತಿಳಿಸಿದ್ದಾರೆ. ಇಮ್ಮುಂದೆ ಇಂತಹ ವರ್ತನೆ ಮುಂದುವರೆದರೆ ಅಮಾನತ್ತುಗೊಳಿಸಲು ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ತಾ.ಪಂ.ಉಪಾಧ್ಯಕ್ಷ ಎಲ್.ಮಜ್ಯಾನಾಯ್ಕ್, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ.ಜಾವೀದ್ ಮುಖಂಡ ಎಂ.ಪಿ.ನಾಯ್ಕ್, ಆರ್.ಲೋಕೇಶ್, ನಿಟ್ಟೂರು ಸಣ್ಣ ಹಾಲಪ್ಪ, ವಕೀಲ ಕೆಂಗಳ್ಳಿ ಪ್ರಕಾಶ್, ಗೀರಜ್ಜಿ ನಾಗರಾಜ್, ಬಾಗಳಿ ಕೊಟ್ರೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.