ದಾವಣಗೆರೆ: ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ 2022 ನೇ ಸಾಲಿನ ತರಳಬಾಳು ಹುಣ್ಣಿಮೆ ಮಹೋತ್ಸವ ಆಯೋಜಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಹುಣ್ಣಿಮೆ ಮಹೋತ್ಸವನ್ನು ಮುಂದೂಡಲಾಗಿದೆ ಎಂದು ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.
ಹುಣ್ಣಿಮೆ ಮಹೋತ್ಸವ ವಿಚಾರವಾಗಿ ಆ ಭಾಗದ ಶಿಷ್ಯ ಪ್ರಮುಖರು, ನಿನ್ನೆ (7-1-2022) ಸಿರಿಗೆರೆಗೆ ಬಂದು ಶ್ರೀ ಜಗದ್ಗುರುಗಳ ಸಮ್ಮುಖದಲ್ಲಿ ಸಭೆ ನಡೆಸಿದರು. ದಿನೇ ದಿನೇ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರವು ವಿಧಿಸಿರುವ ನಿರ್ಬಂಧವನ್ನು ತಪ್ಪದೆ ಪಾಲಿಸಬೇಕೆಂದೂ, ಮುಂದಿನ ತಿಂಗಳು (ಫೆಬ್ರವರಿ 8 ರಿಂದ 16 ರ ವರೆಗೆ) ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಬೇಕೆಂದೂ ಸಭೆಯು ತೀರ್ಮಾನಿಸಲಾಯಿತು.
ಇದುವರೆಗೆ ಭಕ್ತಾದಿಗಳಿಂದ ಒಂದು ಕೋಟಿ ಅರವತ್ತೆಂಟು ಲಕ್ಷ ರೂ. ಗಳಿಗೂ ಹೆಚ್ಚು ವಾಗ್ದಾನವಾಗಿರುವ ನಿಧಿಯನ್ನು ಸಂಗ್ರಹ ಮಾಡಬಾರದೆಂದೂ ಸಹ ತೀರ್ಮಾನಿಸಲಾಗಿದೆ. ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸದ್ಧರ್ಮ ಪೀಠಾರೋಹಣವನ್ನು ಮಠದಲ್ಲಿಯೇ ಸರಳವಾಗಿ ನಡೆಸಲು ತೀರ್ಮಾನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



